ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಭರತ

ಅಯೋಧ್ಯಾಕಾಂಡ/೭೨

ಅಯೋಧ್ಯೆಗೆ ಮರಳಿ ಬಂದ ನಂತರ ಭರತನಿಗೆ ತನ್ನ ಪೂಜ್ಯ ತಂದೆಯ
ಮರಣದ ಮತ್ತು ರಾಮನ ವನವಾಸದ ದುರ್ಘಟನೆಗಳು ತಿಳಿದುಬಂದವು.
ಇವುಗಳಿಗೆ ತನ್ನ ತಾಯಿಯು ಮೂಲಕಾರಣಳೆಂಬುದನ್ನು ಅರಿತಾಗ ಆತನು
ಕುಪಿತನಾದನು. ಯಾವ ಕಾರಣಕ್ಕಾಗಿ ರಾಮನನ್ನು ವನವಾಸಕ್ಕೆ ಕಳುಹಿಸುವ
ಘೋರ ಕೃತ್ಯವನ್ನೆಸಗಿದೆ? ರಾಮನಿಂದ ನಡೆದ ಅಪರಾಧವಾದರೂ ಯಾವುದು?
ಎಂಬ ಅನೇಕ ಪ್ರಶ್ನೆಗಳನ್ನು ಕೈಕೇಯಿಗೆ ಕೇಳಿ ತರಾಟೆಗೆ ತೆಗೆದುಕೊಂಡನು.
ಸ್ವತಃ ಬಲು ಬುದ್ದಿವಂತೆ ಎಂದು ಭಾವಿಸುತ್ತಿದ್ದ ಕೈಕೇಯಿಯು ಆತುರದಿಂದ
ಮತ್ತು ಸಡಗರದಿಂದ ಹೀಗೆಂದಳು-
ನ ಬ್ರಾಹ್ಮಣಧನಂ ಕಿಂಚಿದ್ ಧೃತಂ ರಾಮೇಣ ಕಸ್ಯಚಿತ್ |
ಕಶ್ಚಿನ್ನಾಢ್ಯೋ ದರಿದ್ರೋ ವಾ ತೇನಾಪಾಪೋ ವಿಹಂಸಿತಃ |
ನ ರಾಮಃ ಪರದಾರಾನ್ಸಚಕ್ಷುರ್ಭ್ಯಾಮಪಿ ಪಶ್ಯತಿ ‖೪೮‖
ಮಯಾ ತು ಪುತ್ರ ಶ್ರುತ್ವೈವ ರಾಮಸ್ಯೇಹಾಭಿಷೇಚನಮ್ |
ಯಾಚಿತಸ್ತೇ ಪಿತಾ ರಾಜ್ಯಂ ರಾಮಸ್ಯ ಚ ವಿವಾಸನಮ್ ‖೪೯‖

“ರಾಮನು ಯಾವದೇ ಬ್ರಾಹ್ಮಣರ ಧನವನ್ನು ಅಪಹರಿಸಿಲ್ಲ;
ನಿರಪರಾಧಿಯಾದ ಯಾವ ಶ್ರೀಮಂತನ ಇಲ್ಲವೇ ಬಡವನ ಪ್ರಾಣಾಪಹರಣವನನು
ಮಾಡಿಲ್ಲ; ಆತನು ಪರಸ್ತ್ರೀಯರನ್ನು ಕಣ್ಣೆತ್ತಿಯೂ ನೋಡಿಲ್ಲ; ಆದರೆ ರಾಮನಿಗೆ
ರಾಜ್ಯಾಭಿಷೇಕವಾಗಲಿದೆಯೆಂದು ತಿಳಿದ ತಕ್ಷಣ ನಿನಗೆ ರಾಜ್ಯ, ರಾಮನಿಗೆ ವನವಾಸ
ಎಂಬೆರಡು ವರಗಳನ್ನು ನಿನ್ನ ಪಿತನಿಂದ ಬೇಡಿಕೊಂಡೆನು.”
ಈ ಸಂಸ್ಕೃತ ಶ್ಲೋಕದಲ್ಲಿ 'ವರ'ವೆಂಬ ಶಬ್ದವಿರದಿದ್ದರೂ ಅದು
ಅಭಿಪ್ರೇತವಿದೆ.

ಅಯೋಧ್ಯಾಕಾಂಡ/೧೦೬

ಅರಣ್ಯಕ್ಕೆ ತೆರಳಿದ ರಾಮನನ್ನು ಅಯೋಧ್ಯೆಗೆ ಪುನಃ ಕರೆತಂದು
ರಾಜ್ಯಾಭಿಷೇಕವನ್ನು ಮಾಡುವ ಉದ್ದೇಶಪ್ರೇರಿತನಾಗಿ ಭರತನು ರಾಮನು
ಭೇಟಿಗೆಂದು ಹೋದನು. ರಾಮನ ಭೇಟಿಯಾದಾಗ, ಅಯೋಧ್ಯೆಗೆ ಮರಳಲು
ಭರತನು ಕಳಕಳಿಯಿಂದ ಪ್ರಾರ್ಥಿಸಿದನು; ಆದರೆ, ರಾಮನು ದೃಢನಿಶ್ಚಯವಾಗಿದ್ದನು.