ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅಯೋಧ್ಯಾಕಾಂಡ/೧೧೧

ರಾಮನು ರಾಜ್ಯವನ್ನು ಸ್ವೀಕರಿಸಬೇಕೆಂದು ಭರತನು ಪರಿಪರಿಯಾಗಿ
ರಾಮನಿಗೆ ಬಿನ್ನವಿಸಿದನು; ಆದರೆ ತನ್ನ ನಿಶ್ಚಯದಿಂದ ರಾಮನು
ಪರಾವೃತ್ತಗೊಳ್ಳಲಿಲ್ಲ. ಭರತನು ರಾಜ್ಯವನ್ನಾಳುವದು ಮತ್ತು ತಾನು
ವನವಾಸದಲ್ಲಿರುವದು ಹೇಗೆ ಯೋಗ್ಯವಾಗಿದೆ ಎಂದು ರಾಮನು ಭರತನಿಗೆ
ತಿಳಿಸಿಹೇಳಲು ಯತ್ನಿಸಿದನು. ಕೊನೆಗೆ ರಾಮನು ನುಡಿದದ್ದು ಭರತನಿಗೆ
ಸರಿಯೆನಿಸಿತು. ಆಚಮನವನ್ನು ಮಾಡಿ ಭರತನು ಇಂತೆಂದನು-
ಶೃಣ್ವಂತು ಮೇ ಪರಿಷದೋ ಮಂತ್ರಿಣಃ ಶೃಣುಯುಸ್ತಥಾ ‖೨೪‖
ನ ಯಾಚೇ ಪಿತರಂ ರಾಜ್ಯಂ ನನುಶಾಸಾಮಿ ಮಾತರಮ್ |
ಏವಂ ಪರಮಧರ್ಮಜ್ಞಂ ನಾನುಜಾನಾಮಿ ರಾಘವನ್ ‖೨೫‖
ಯದಿ ತ್ವವಶ್ಯಂ ವಸ್ತವ್ಯಂ ಕರ್ತವ್ಯಂ ಚ ಪಿತೃರ್ವಚಃ |
ಅಹಮೇವ ನಿವತ್ಸ್ಯಾಮಿ ಚತುರ್ದಶ ವನೇ ಸಮಾಃ ‖೨೬‖

“ಸಭಿಕರು ಮತ್ತು ಮಂತ್ರಿಗಳು ನನ್ನ ಹೇಳಿಕೆಯನ್ನು ಆಲಿಸಬೆಕು. ನಾನು
ರಾಜ್ಯಕ್ಕಾಗಿ ತಂದೆಯನ್ನು ಪ್ರಾರ್ಥಿಸಿಲ್ಲ. ಈ ರೀತಿ ವರವನ್ನು ಕೇಳೆಂದು ತಾಯಿಗೆ
ಹೇಳಲಿಲ್ಲ; ಅದೇ ರೀತಿ ಪರಮಧರ್ಮಜ್ಞನಾದ ರಾಮನು ವನಕ್ಕೆ ಹೋಗಬೇಕೆಂದು
ಆಜ್ಞಾಪಿಸಿಲ್ಲ. ಹೀಗಿದ್ದರೂ ವನದಲ್ಲಿ ವಾಸವಾಗಿ ರಾಮನು ಪಿತನ ಆಜ್ಞೆಯನ್ನು
ಪಾಲಿಸುವದಿದ್ದರೆ, ನಾನೇ ಹದಿನಾಲ್ಕು ವರ್ಷ ವನವಾಸದಲ್ಲಿರುವೆ.”
ಸಂಸ್ಕೃತ ಶೋಕದಲ್ಲಿ 'ವರ' ಈ ಶಬ್ದವಿರದಿದ್ದರೂ ಅದು ಅಭಿಪ್ರೇತವಾಗಿದೆ.
ಭರತನ ಭಾಷಣವನ್ನು ಕೇಳಿ, ರಾಮನಿಗೆ ಅಚ್ಚರಿಯಾಯಿತು. ಅವನು
ಪುರಜನರಿಗೆ ಈ ರೀತಿ ಅಂದನು- “ಭರತನು ವನವಾಸದಲ್ಲಿರುವದು ನಡೆಯು
ವಂತಿಲ್ಲ. ತಂದೆಯ ಮಾತಿನಂತೆ ಸರಿಯಾಗಿ ನಡೆದುಕೊಳ್ಳುವದೆಂದರೆ ನಾನು
ವನವಾಸದಲ್ಲಿರಬೇಕು; ಮತ್ತು ಭರತನು ಅಯೋಧ್ಯೆಯಲ್ಲಿದ್ದು ರಾಜ್ಯಕಾರಭಾರ
ಮಾಡಬೇಕು! ರಾಜ್ಯಾಡಳಿತದ ಎಲ್ಲ ಯೋಗ್ಯತೆ ಆತನಲ್ಲಿದೆ ಎಂಬುದನ್ನು ನಾನು
ಬಲ್ಲೆನು. ವನವಾಸವನ್ನು ಪೂರೈಸಿ ಮರಳಿ ಬಂದ ನಂತರ ನಾನು ಪೃಥ್ವಿಯ
ಪರಿಪಾಲನೆಯನ್ನು ಮಾಡುವೆನು.
ವೃತೋ ರಾಜಾ ಹಿ ಕೈಕೇಯ್ಯಾ ಮಯಾ ತದ್ವಚನಂ ಕೃತಮ್ |
ಅನೃತಾನ್ಮೋಚಯಾನೇನ ಪಿತರಂ ತಂ ಮಹೀಪತಿಮ್ ‖೩೨‖