ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಆಗ ದೇವತೆಗಳು, ಯಕ್ಷ, ರಾಕ್ಷಸ, ಋಷಿ, ಮಾನವಾದಿ ಸಮೂಹಗಳಲ್ಲಿ
ಈ ವರದ ಬಗ್ಗೆ ಭಿನ್ನಭಿನ್ನ ಪ್ರತಿಕ್ರಿಯೆಗಳು ಪ್ರಕಟವಾದವೆಂದು ಕಂಡುಬಂದಿದೆ.

ಈ ಮೇಲಿನ ವರದ ಬಗ್ಗೆ ಪ್ರಕಟವಾದ ಅನೇಕರ ವಿವಿಧ ಪ್ರತಿಕ್ರಿಯೆಗಳು

ರಾಮ

ಯುದ್ಧಕಾಂಡ/೩೭

ವಿಭೀಷಣನಿಂದ ರಾವಣನ ದುಷ್ಕೃತ್ಯಗಳ ಪಟ್ಟಿಯನ್ನೇ ಕೇಳಿದ ರಾಮನು
ಯೋಚಿಸಿ, ಒಂದು ಯೋಜನೆಯನ್ನು ಆತನ ಮುಂದಿಡುತ್ತಾರೆ:
ಲಂಕೆಯ ಪೂರ್ವದ್ವಾರದಲ್ಲಿ ನೀಲನು, ದಕ್ಷಿಣದ್ವಾರದಲ್ಲಿ ಅಂಗದನು,
ಪಶ್ಚಿಮದ್ವಾರದಲ್ಲಿ ಅತರ್ಕ್ಯರೂಪದಲ್ಲಿ ಹನುಮಂತನು, ಈ ರೀತಿ ಅನೇಕ ವಾನರರ
ಸಹಿತವಾಗಿ ರಾಕ್ಷಸರ ಮೇಲೆ ಏರಿಹೋಗಬೇಕು!
ದೈತ್ಯದಾನವಸಮಘಾನಾಮೃಷೀಣಾಂ ಚ ಮಹಾತ್ಮನಾಮ್ |
ವಿಪ್ರಕಾರಪ್ರಿಯಃ ಕ್ಷುದ್ರೋ ವರದಾನಬಲಾನ್ವಿತಃ ‖೨೯‖
ಪರಿಕ್ರಮತಿ ಯಃ ಸರ್ವಾಂಲ್ಲೋಕಾನ್ಸಂತಾಪಯನ್ಪ್ರಜಾಃ |
ತಸ್ಯಾಹಂ ರಾಕ್ಷಸೇಂದ್ರಸ್ಯ ಸ್ವಯಮೇವ ವಧೆ ಧೃತಃ ‖೩೦‖

ವರಪ್ರಾಪ್ತಿಯಾದ್ದರಿಂದ ಬಲಗೊಂಡ ಆ ನೀಚನು, ದೈತ್ಯ, ದಾನವ ಮತ್ತು
ಮಹಾತ್ಮರಾದ ಋಷಿಗಳನ್ನೂ ಪೀಡಿಸುವದರಲ್ಲಿ ಆನಂದಪಡೆಯುತ್ತಾನೆ. ಪ್ರಜೆಗಳಿಗೆ
ದುಃಖವನ್ನುಂಟುಮಾಡಿ ಅವರ ಪ್ರದೇಶಗಳನ್ನು ವಶಮಾಡಿಕೊಳ್ಳುತ್ತಾನೆ. ಆ
ರಾಕ್ಷಸಾಧಿಪತಿಯಾದ ರಾವಣನನ್ನು ವಧಿಸುವ ಪ್ರತಿಜ್ಞೆಯನ್ನು ನಾನು ಮಾಡಿದ್ದೇನೆ.
ಸೈನ್ಯದೊಡನೆ ರಾವಣನು ಇರುವ ನಗರದ ಉತ್ತರದ್ವಾರದ ಮೇಲೆ ದಾಳಿ
ಮಾಡಿ ಲಕ್ಷ್ಮಣನೊಡನೆ ನಾನು ಒಳಗೆ ಪ್ರವೇಶಿಸುವೆ.

ಯುದ್ಧಕಾಂಡ/೪೧

ರಾಕ್ಷಸರನ್ನು ಕೊಲ್ಲಲು ರಾಮನು ಸೈನ್ಯವನ್ನು ಸಜ್ಜುಗೊಳಿಸಿದನು.
ಯುದ್ಧವನ್ನು ಪ್ರಾರಂಭಿಸುವ ಮೊದಲು, ರಾಮನು ಮಾತುಕತೆಗೆಂದು ಅಂಗದನನ್ನು
ರಾವಣನ ಬಳಿಗೆ ಕಳುಹಿದನು. “ಸಮುದ್ರವನ್ನು ದಾಟಿ ನಿರ್ಭಯನಾಗಿ ನಾನು
ನಿನ್ನ ಲಂಕಾನಗರಕ್ಕೆ ಬಂದಿದ್ದೇನೆ” ಎಂದು ರಾವಣನಿಗೆ ತಿಳಿಸೆಂದು ಹೇಳಿದನು.