ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೪೯


'ಅಶಕ್ಯ' ಮತ್ತು 'ಅಜಿಂಕ್ಯ' ಎಂಬ ಸಂಹಾರನಾಮಕ ಐವತ್ತು ಪುತ್ರರಾದರು.
ದಕ್ಷಕನ್ಯೆಯರಿಗೆ ಹುಟ್ಟಿದ ಆ ಪುತ್ರರು ಅತಿ ತೇಜಸ್ಸುಳ್ಳವರೂ, ವಿಜಯಶಾಲಿಗೂ
ಮತ್ತು ಮಹಾವೀರರೂ ಆಗಿದ್ದರು; ಇದಲ್ಲದೆ ಹಲವು ಪ್ರಕಾರದ ರೂಪಗಳನ್ನು
ಧರಿಸುವ ಶಕ್ತಿಯು ಅವರಲ್ಲಿತ್ತು. ಈ ಎಲ್ಲ ಕುಶಿಕಪುತ್ರರೆಂದೆನಿಸುವ ಅಸ್ತ್ರಗಳನ್ನು
ವಿಶ್ವಾಮಿತ್ರನು ಯಥಾವತ್ತಾಗಿ ಅರಿತಿದ್ದನು. ಅಪೂರ್ವ ಅಸ್ತ್ರಗಳನ್ನು ನಿರ್ಮಿಸುವ
ಸಾಮರ್ಥ್ಯವೂ ಆತನ ಬಳಿ ಇತ್ತು. “ಆ ಮಹಾತೇಜಸ್ವಿ, ಮಹಾವೀರನಾದ
ವಿಶ್ವಾಮಿತ್ರ ಮುನಿಯು ರಾಮನನ್ನು ಕರೆದೊಯ್ಯುತ್ತಿರುವದರಿಂದ ನಿನಗೆ ಯಾವ
ಸಂದೇಹವೂ ಬೇಡ! ನಿನ್ನ ಪುತ್ರನಿಗೆ ಅನುಗ್ರಹಿಸಲೆಂದು ಈತನು ನಿನ್ನ ಬಳಿ
ವಿನಂತಿಸಿದ್ದಾನೆ.” ಈ ರೀತಿ ವಸಿಷ್ಠರು ದಶರಥನಿಗೆ ಉಪದೇಶಿಸಿದ್ದರಿಂದ ಅದು
ಅವನಿಗೆ ಸರಿಯೆನಿಸಿತು.
ಜಯಾ ಮತ್ತು ಸುಪ್ರಭಾ ಇವರಿಗೆ ಯಾರು ವರಗಳನ್ನು ಕೊಟ್ಟರು?
ಯಾವ ಕಾರಣಕ್ಕಾಗಿ ಕೊಟ್ಟರು? ಎಂಬುದು ಸ್ಪಷ್ಟವಾಗಿಲ್ಲ. ಆದ್ದರಿಂದ ಈ
ವರಕ್ಕೆ 'ಯಾಚಿತ' ವರ ಇಲ್ಲವೇ 'ಅಯಾಚಿತ' ವರವೆಂದು ನಿಶ್ಚಿತವಾಗಿ ಹೇಳಲು
ಬರುವಂತಿಲ್ಲ.

೭. ಇಂದ್ರ < ಮಲದ, ಕರುಷ

ಬಾಲಕಾಂಡ/೨೪

ವಿಶ್ವಾಮಿತ್ರ ಋಷಿಯ ಯಜ್ಞದ ರಕ್ಷಣೆಗೆಂದು ರಾಮ-ಲಕ್ಷ್ಮಣರು ಆತನೊಡನೆ
ಹೋಗುತ್ತಿದ್ದಾಗ, ರಾಮನ ಇಷ್ಟದಂತೆ ವಿಶ್ವಾಮಿತ್ರನು ಸರಯೂ ನದಿಯ ಉತ್ಪತ್ತಿ,
ತಾಟಕವನ ಇತ್ಯಾದಿ ವಿಷಯಗಳನ್ನು ಕುರಿತು ಅವರಿಗೆ ಹೇಳುತ್ತಾನೆ-
ಪೂರ್ವದಲ್ಲಿ ದೇವತೆಗಳ ಪ್ರಯತ್ನದಿಂದ 'ಮಲದ' ಹಾಗೂ 'ಕರುಷ' ಈ
ದೇಶಗಳು ನಿರ್ಮಿತವಾದವು. ಆ ದೇಶಗಳು ಬಹಳ ಸಮೃದ್ಧವಾಗಿದ್ದವು.
ವೃತ್ರಾಸುರನ ಸಂಹಾರದ ಸಮಯದಲ್ಲಿಯ ಅಶುದ್ಧ ಆಚರಣೆಯಿಂದ ಮತ್ತು
ಕ್ಷುಧೆಯಿಂದ ಗ್ರಸ್ತನಾದ ಇಂದ್ರನಿಗೆ ಬ್ರಹ್ಮಹತ್ಯೆಯು ತಗುಲಿತು. ಆಗ ಕಲ್ಮಷಗೊಂಡ
ಇಂದ್ರನನ್ನು, ದೇವತೆಗಳು ಹಾಗೂ ಋಷಿಗಳು ಗಂಗಾಜಲದಿಂದ ಸ್ನಾನ ಮಾಡಿಸಿ
ಆತನ ಕಲ್ಮಷವನ್ನು ಕಳೆದರು. ಈ ಭೂಪ್ರದೇಶದಲ್ಲಿ ದೇವತೆಗಳು ಮಹೇಂದ್ರನ
ಕಲ್ಮಷವನ್ನೂ, ಶರೀರದಲ್ಲಿಯ ಕೊಳೆಯನ್ನೂ, ಕ್ಷುಧೆಯನ್ನೂ ವಿಸರ್ಜಿಸಿದರು.
ಇಂದ್ರನು ಶುದ್ಧನಾದನು. ಆತನ ದೋಷಗಳನ್ನು ಈ ಭೂಪ್ರದೇಶಗಳು
ಸ್ವೀಕರಿಸಿದ್ದರಿಂದ ಇಂದ್ರನು ಈ ದೇಶಗಳ ಮೇಲೆ ಸಂತುಷ್ಟನಾದನು.