ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸಂಬಂಧಿತವಾದಂಥವು. ಇದರಲ್ಲಿ ಕಂಡು ಬರುವ ಸುಖದುಃಖಗಳು, ಯಶಾಪಯಶಗಳೂ, ಗುಣಾವಗುಣಗಳು ನಮ್ಮ-ನಿಮ್ಮವಾಗಿವೆ. ಈ ಗ್ರಂಥಗಳಲ್ಲಿಯ ಅಮಾನವೀಯ ಎಂದರೆ ದೈವೀ (superhuman) ಅಂಶವು ಮಹಾಮಾನವನ ಅಂಶವಾಗಿದೆ. ಸಾಹಿತ್ಯದ ದೃಷ್ಟಿಯಿಂದ ಈ ಗ್ರಂಥಗಳ ಮಹಿಮೆ ಅಸಾಧಾರಣ, ಗತಿಸಿದ ಕಾಲದೊಡನೆ ಇವು ಚಿರಂಜೀವಿ; ಅಳಿಗಾಲವಿಲ್ಲದ ಗ್ರಂಥಗಳಾಗಿವೆ. ರತ್ನಾಕರ ಕಡಲಿನಂತೆ ಈ ಗ್ರಂಥಗಳು ಸಂಪತ್ತನ್ನೊಳಗೊಂಡಿವೆ. ಇವುಗಳಲ್ಲಿ ಅಡಗಿದ ವಿವಿಧ ಸೌಂದರ್ಯಸ್ಥಲಗಳ ಪರಿಚಯವನ್ನು ವಿದ್ವಾಂಸರು ಕಾಲಕಾಲಕ್ಕೆ ಮಾಡಿಕೊಟ್ಟಿದ್ದಾರೆ. ಸಂಶೋಧಕರು ಬಹಳಷ್ಟು ಶ್ರಮ ವಹಿಸಿ ಈ ಗ್ರಂಥಗಳ ಪರಿಶೋಧಿತ ಆವೃತ್ತಿಗಳನ್ನು ತಯಾರಿಸಿದ್ದಾರೆ. ಇವುಗಳಿಂದ ಕಾವ್ಯ ನಾಟಕಾದಿ ಸಕಲ ಲಲಿತ ಸಾಹಿತ್ಯಕ್ಕೆ ವಿವಿಧ ವಿಷಯಗಳು ಲಬ್ದವಾಗಿವೆ. ರಸಿಕರಿಗೆ ಇವುಗಳ ಬಗ್ಗೆ ಅಪಾರ ಪ್ರೀತಿ. ಈ ಗ್ರಂಥಗಳ ಹಿರಿಮೆಯನ್ನು ಶಬ್ದಗಳಿಂದ ವರ್ಣಿಸಲಾಗುವಂತಿಲ್ಲ.
ಆದಿಕವಿ ವಾಲ್ಮೀಕಿಯು ರಚಿಸಿದ ಮಹಾಕಾವ್ಯ ರಾಮಾಯಣವು ಮಾನವ ಜಾತಿಗೆ ದೀಪಸ್ತಂಭದಂತೆ ಸತತವಾಗಿ ಬೆಳಕನ್ನು ತೋರುತ್ತದೆ. ಈ ಗ್ರಂಥದ ಹಿರಿಮೆಯು ವರ್ಣನಾತೀತವಾಗಿದೆ. “ಈ ಭೂಲೋಕದ ಮೇಲೆ ಎಲ್ಲಿಯವರೆಗೆ ಪರ್ವತಗಳು ವಿರಾಜಿಸುತ್ತವೆಯೋ ನದಿಗಳು ಹರಿಯತುತವೆಯೋ ಅಲ್ಲಿಯವರೆಗೆ ರಾಮಾಯಣವು ಜನರ ಬಾಯಿಯಲ್ಲಿ ಇರುವುದು ಖಂಡಿತ” ಎಂದು ಆಡಿದ ಬ್ರಹ್ಮದೇವನ ಭವಿಷ್ಯವಾಣಿಯನ್ನು ಕಾಲವೇ ಸ್ಥಿರ ಮಾಡಿ ತೋರಿಸಿದೆ. ಉದಾತ್ತತೆ, ಆದರ್ಶಗಳ ಗಣಿಯೇ ಈ ಗ್ರಂಥ. ವಾಲ್ಮೀಕಿಯು ಜನಿಸಿರದಿದ್ದರೆ ನಮಗೆ “ರಾಮಕಥೆಯು ಅದೆಂತು ದೊರಕುತ್ತಿತ್ತು? ಈ ಕಥೆಯನ್ನು ನಾವು ಬ್ರಹ್ಮಾಂಡದಾಚೆ ಹರಡಿಸೋಣ!” ಎಂದು ರಾಮದಾಸರು ವಾಲ್ಮೀಕಿಯನ್ನೂ ರಾಮಾಯಣವನ್ನೂ ಗೌರವಿಸಿದ್ದಾರೆ. “ಜನರಿಗೆ ತಮ್ಮ ಸ್ವಂತ ಸೋದರರು ನಿಜವೆನಿಸಲಿಕ್ಕಿಲ್ಲ; ಆದರೆ ಭರತ-ಲಕ್ಷ್ಮಣರು ಆತ್ಮೀಯರೆನಿಸುತ್ತಾರೆ. ಸ್ವಪತ್ನಿಗಿಂತ ಸೀತೆಯು ನಿಜವೆನಿಸುತ್ತಾಳೆ. ಸ್ವಪತಿಗಿಂತ ರಾಮನು ಹೆಚ್ಚೆನಿಸುತ್ತಾನೆ. ವಾಲ್ಮೀಕಿಯು ಈ ರೀತಿ ತ್ರಿಕಾಲಾಬಾಧಿತವಾದ ಸಂಸ್ಕೃತಿಯನ್ನು ರಾಮಾಯಣದಲ್ಲಿ ಸೃಷ್ಟಿಸಿದ್ದಾನೆ. “ಭಾರತೀಯ ಸಂಸ್ಕೃತಿಯ ಆದರ್ಶವೆಂದರೆ ರಾಮಾಯಣ; ಸಮಾಜ ಜೀವನಕ್ಕೆ ಉದಾತ್ತತೆಯನ್ನು ಒದಗಿಸಿಕೊಟ್ಟ ಗ್ರಂಥವೆಂದರೆ ರಾಮಾಯಣ” ಎಂದು ರವೀಂದ್ರನಾಥ ಟಾಗೋರರು ಇದನ್ನು ಪ್ರಶಂಸಿಸಿದ್ದಾರೆ. “ರಾಮಾಯಣವೆಂದರೆ ಸತ್ಯ ಘಟನೆಗಳನ್ನಾಧರಿಸಿ ರೂಪಿಸಿದ ಐತಿಹಾಸಿಕ ಮಹಾಕಾವ್ಯ; ಅದು ನಮ್ಮ