ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೫೭


ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ ಪಿತೃಗಳಿಗೆ ಸ್ವರ್ಗವನ್ನು ದೊರಕಿಸಿ
ಕೊಡುವದು ಮತ್ತು ನಾನು ಮಕ್ಕಳನ್ನು ಪಡೆಯುವದು ಈ ಉದ್ದೇಶಗಳಿದ್ದ
ಕಾರಣ ಈ ಎರಡೂ ವರಗಳು 'ಯಾಚಿತ'ವಾಗಿವೆ.


೧೩. ಕಶ್ಯಪ < ದಿತಿ

ಬಾಲಕಾಂಡ/೪೬

ವಿಶ್ವಾಮಿತ್ರ ಋಷಿಯು ರಾಮನಿಗೆ ಮರುದ್ಗಣಗಳ ಜನ್ಮವೃತ್ತಾಂತವನ್ನು
ಹೇಳುತ್ತಿದ್ದಾನೆ.
ದಿತಿ ಮತ್ತು ಅದಿತಿಯರು ಕಶ್ಯಪನ ಭಾರ್ಯೆಯರಾಗಿದ್ದರು. ದಿತಿಯ
ಪುತ್ರರೆಂದರೆ ದೈತ್ಯರು ಮತ್ತು ಅದಿತಿಯ ಪುತ್ರರೆಂದರೆ ದೇವತೆಗಳು.
ಅಮೃತಮಂಥನದ ಕಾಲದಲ್ಲಿ ದೇವ-ದಾನವರಲ್ಲಿ ನಡೆದ ಯುದ್ಧದಲ್ಲಿ ದೇವತೆಗಳು
ದೈತ್ಯರನ್ನು ವಧಿಸಿದರು. ದಿತಿಯು ಆಗ ದುಃಖಿತಳಾಗಿ ಪತಿಗೆ ಈ ರೀತಿ
ಎಂದಳು- “ಭಗವನ್, ನಿಮ್ಮ ಪರಾಕ್ರಮಿಗಳಾದ ಪುತ್ರರು ನನ್ನ ಮಕ್ಕಳನ್ನು
ಕೊಂದಿದ್ದಾರೆ. ಉಗ್ರ ತಪಸ್ಸನ್ನಾಚರಿಸಿ ಇಂದ್ರನನ್ನು ಘಾತಿಸುವಂಥ ಪುತ್ರನನ್ನು
ನಿಮ್ಮಿಂದ ನಾನು ಹೊಂದಬೇಕೆಂಬ ಇಚ್ಫೆ ನನಗಿದೆ. ನಾನು ತಪಸ್ಸನ್ನು ಆಚರಿಸುವೆ.
ನನಗೆ ಗರ್ಭ ದಾನವನ್ನು ಮಾಡಿರಿ!”
ಇಂದ್ರನನ್ನು ವಧಿಸುವ ಪುತ್ರನನ್ನು ಪಡೆಯಲೋಸುಗ ತಪಸ್ಸನ್ನು ಕೈಕೊಳ್ಳಲು
ಅನುಜ್ಞೆಯನ್ನು ಅವಳು ಬೇಡಿದಾಗ ಕಶ್ಯಪ ಮುನಿಯು ಹೀಗೆಂದನು-

ಏವಂ ಭವತು ಭದ್ರಂ ತೇ ಶುಚಿರ್ಭವ ತಪೋಧನೇ

ಜನಯಿಷ್ಯಸಿ ಪುತಂ ತವಂ ಶಕ್ರಹಂತಾರಮಾಹವೇ ‖೫‖

ಪೂರ್ಣೇ ವರ್ಷಸಹಸ್ರೇ ತು ಶುಚಿರ್ಯದಿ ಭವಿಷ್ಯಸಿ

ಪುತ್ರ ತ್ರೈಲೋಕ್ಯಹಂತಾರಂ ಮತ್ತಸ್ತ್ವಂ ಜನಯಿಷ್ಯಸಿ ‖೬‖


“ಹೇ ತಪೋಧನಳೆ, ನಿನಗೆ ಶುಭವಾಗಲಿ! ನೀನು ಶುಚಿರ್ಭೂತಳಾಗಿರು!
ಎಂದರೆ ಇಂದ್ರನನ್ನು ಯುದ್ಧದಲ್ಲಿ ಜಯಿಸುವ ಪುತ್ರನು ನಿನಗೆ ಹುಟ್ಟುವನು.
ಒಂದು ಸಾವಿರ ವರ್ಷಗಳವರೆಗೆ ಶುಚಿರ್ಭೂತಳಾಗಿ ನೀನು ಉಳಿದರೆ
ತ್ರೈಲೋಕ್ಯಾಧಿಪತಿಯಾದ ಇಂದ್ರನನ್ನು ಕೊಲ್ಲುವ ಮಗನು ನಿನ್ನಿಂದ ನಿನಗೆ
ಹುಟ್ಟುವನು.”