ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ಅಂತಹ ನಿನ್ನ ತಂದೆಯಾದ ಕೈಕೇಯನು ಹಾಸಿಗೆಯ ಮೇಲೆ ಮಲಗಿದ್ದಾಗ,
ಬಹಳ ತೇಜಸ್ಸುಳ್ಳ ಜೃಂಭ ಪಕ್ಷಿಜೋಡಿಯ ಸಂಭಾಷಣೆಯು ಆತನಿಗೆ ಕೇಳಿ
ಬಂದಿತು. ಆತನಿಗೆ ಆ ಪಕ್ಷಿಗಳ ಧ್ವನಿಯ ಅಭಿಪ್ರಾಯವು ತಿಳಿಯಿತು. ಆಗ ಆತನು
ಒಂದೇ ಸಮನೆ ನಗಲಾರಂಭಿಸಿದನು. ನಿನ್ನ ತಾಯಿಯು ನಗುವ ಕಾರಣವನ್ನು
ಹೇಳಬೇಕೆಂದಳು. ಆಗ ಕೈಕೇಯನು ಅವಳಿಗೆ- 'ನಾನು ಏತಕ್ಕಾಗಿ ನಗುತ್ತಿರುವೆನು
ಎಂಬುದನ್ನು ನಿನಗೆ ತಿಳಿಸಿದರೆ ನಾನು ತಕ್ಷಣ ಮರಣಹೊಂದುವೆ' ಎಂದನು.
ಆಗ ಪತಿಯ ಮೃತ್ಯುವನ್ನು ಬಯಸುವ ನಿನ್ನ ತಾಯಿಯು ಕೋಪಗೊಂಡು
'ನೀನು ಬದುಕಿರು ಇಲ್ಲವೇ ಸತ್ತುಹೋಗು; ನನಗೆ ನಿನ್ನ ನಗುವಿನ ಕಾರಣವು
ತಿಳಿಯಲೇಬೇಕು!' ಎಂದು ಹಠ ತೊಟ್ಟಳು. ಆಗ ಕೈಕೇಯ ರಾಜನು ಆ
ವರವನ್ನು ಕೊಟ್ಟ ಋಷಿಯ ಬಳಿಗೆ ಹೋಗಿ ನಡೆದ ವೃತ್ತಾಂತವನ್ನೆಲ್ಲ ಅರುಹಿದನು.
ಆ ಋಷಿಯ ಅಪ್ಪಣೆಯಂತೆ ಆತನು ತನ್ನ ಹೆಂಡತಿಯನ್ನು ಅರಮನೆಯಿಂದ
ಹೊರಗೆ ಹಾಕಿದನು.”
ಈ ಸಂಗತಿಯನ್ನು ಸುಮಂತ್ರನು ಕೈಕೇಯಿಗೆ ತಿಳಿಸಿ “ನಿನ್ನ ನಡತೆಯೂ
ನಿನ್ನ ತಾಯಿಯಂತೆಯೇ ಇದೆ. ನೀನು ನಿನ್ನ ದುರಾಗ್ರಹವನ್ನು ಬಿಟ್ಟುಕೊಡು;
ಪತಿಯ ಇಚ್ಛೆಯಂತೆ ವರ್ತಿಸು ಮತ್ತು ಜನರ ಹಿತರಕ್ಷಣೆ ಮಾಡು!” ಎಂದನು.
ವರವನ್ನು ಕೊಟ್ಟ ಋಷಿಯ ಹೆಸರು ಮತ್ತು ಯಾವ ಕಾರಣದಿಂದ ಈ
ವರವನ್ನು ಕೊಟ್ಟಿದ್ದನು ಎಂಬುದು ಸ್ಪಷ್ಟವಿಲ್ಲ. ಹೀಗಿರುವುದರಿಂದ ಈ ವರವು
ಯಾಚಿತವೋ ಅಥವಾ ಅಯಾಚಿತವೋ ಎಂಬುದನ್ನು ನಿಖರವಾಗಿ ಹೇಳಲು
ಬರುವಂತಿಲ್ಲ.

೨೦. ಚ್ಯವನಭಾರ್ಗವ < ಕಾಲಿಂದಿ
ಅಯೋಧ್ಯಾಕಾಂಡ/೧೧೦
ವಸಿಷ್ಠ ಋಷಿಯು ರಾಮನಿಗೆ ರಘುವಂಶದ ಪುರುಷರ ಘನವಂತಿಕೆಯನ್ನು
ಹೇಳುತ್ತಿದ್ದಾನೆ.
ಭರತರಾಜನ ಮಗನು ಅಸಿತ. ಈತನನ್ನು ಕಾಳಗದಲ್ಲಿ ಹೃಹಯ, ತಾಲಜಂಘ,
ಶೂರಶಶಬಿಂದು ಎಂಬ ಶತ್ರುಗಳನ್ನು ಪರಾಜಿತನನ್ನಾಗಿ ಮಾಡಿದನು. ಅನಂತರ
ಆ ರಾಜರ್ಷಿಯು ಒಂದು ಪರ್ವತದ ಮೇಲೆ ಹೋಗಿ ಮರಣ ಹೊಂದಿದನು.
ಆಗ ಆತನ ಇಬ್ಬರು ಮಡದಿಯರು ಗರ್ಭವತಿಯರಾಗಿದ್ದರು. 'ಕಾಲಿಂದಿ' ಎಂಬ
ಭಾರ್ಯೆಯು ತನಗೆ ಉತ್ಕೃಷ್ಟ ಪುತ್ರನು ಹುಟ್ಟಬೇಕೆಂಬ ಇಚ್ಛೆಯನ್ನು ಹೊಂದಿ,