ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಹೇಳಬಹುದು. ಇದರಲ್ಲಿಯ ಬಹಳಷ್ಟು ಘಟನೆಗಳು ಶಾಪ-ವರಗಳನ್ನಾಧರಿಸಿವೆ. ಅವುಗಳ ಪ್ರಭಾವವು ವ್ಯಕ್ತಿಚಿತ್ರಣದಲ್ಲಿಯೂ ಮೂಡಿದೆ. ಶಾಪ-ವರಗಳಿಗೆ ಸ್ವತಂತ್ರ ಸ್ಥಾನವಿಲ್ಲವೆಂಬುದು ನಿಜ; ಆದರೆ, ಕಥೆಯೊಡನೆ ಸಂಪೂರ್ಣ ಸಾಮರಸ್ಯ ಹೊಂದಿರುವುದರಿಂದ, ಅವುಗಳನ್ನು ಕಥೆಯಿಂದ ಬೇರ್ಪಡಿಸುವುದು ಸಾಧ್ಯವಿಲ್ಲ. ಶಾಪ-ವರಗಳನ್ನು ತೆಗೆದುಹಾಕಿದರೆ ಕಥೆಯ ಸೂತ್ರ ಚೌಕಟ್ಟು ಸಂದರ್ಭಗಳು ಅರ್ಥಹೀನವಾಗುತ್ತವೆ. ಶಾಪ-ವರಗಳ ಕಲ್ಪನೆ ಅತಿ ಪುರಾತನವಾದದ್ದು. ವಾಲ್ಮೀಕಿಯು ಅವುಗಳನ್ನು ತನ್‌ ಪ್ರತಿಭೆಯ ಕುಶಲತೆಯಿಂದ ಬಳಸಿ, ಗ್ರಂಥದ ಸೌಂದರ್ಯವನ್ನೂ ಕಳೆಯನ್ನು ಸಾಮರ್ಥ್ಯವನ್ನೂ ವರ್ಧಿಸಿದ್ದಾನೆ.
ವೇದೋಪನಿಷತ್ತು, ರಾಮಾಯಣ ಮಹಾಭಾರತ, ಭಾಗವತ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ಶಾಪ-ವರಗಳ ಉಲ್ಲೇಖ ಅಲ್ಲಲ್ಲಿ ಬಂದಿದೆ. ಇವುಗಳನ್ನು ಪರಿಶೀಲಿಸಿ ಒಟ್ಟುಗೂಡಿಸಿ ಒಂದು ಸಂದರ್ಭಗ್ರಂಥವನ್ನು ರಚಿಸುವಂತಿದೆ. ಶಾಪ ಮತ್ತು ವರಗಳ ಅವಗಾಹನೆಯಿಂದ ಗ್ರಂಥದ ಸ್ವರೂಪ, ಅದರಲ್ಲಿ ವ್ಯಕ್ತವಾಗುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ನೈತಿಕ ಜೀವನದ ವಿಚಾರ, ಸ್ವಭಾವ ವೈಶಿಷ್ಟ್ಯಗಳ ದರ್ಶನ- ಇವೆಲ್ಲ ಕಂಡು ಬರುತ್ತವೆ. ವ್ಯಾಸ- ವಾಲ್ಮೀಕಿಯರಂತಹ ಪ್ರಜ್ಞಾವಂತರು ಶಾಪ-ವರಗಳಿಗೆ ತಮ್ಮ ಗ್ರಂಥಗಳಲ್ಲಿ ಅವಕಾಶವನ್ನೇಕೆ ಕೊಟ್ಟರು? ಶಾಪ-ವರ ಇವುಗಳ ಕಲ್ಪನೆ ಹುಟ್ಟಿದ್ದು ಹೇಗೆ? ಶಾಪ-ವರಗಳು ಈ ಗ್ರಂಥಗಳಿಂದ ಬೇರ್ಪಡಿಸಲಾಗದ ಅಂಶಗಳೇ? ಹಾಗಿರದಿದ್ದರೆ, ಅವುಗಳ ಬಗ್ಗೆ ಇಷ್ಟೊಂದು ಆಕರ್ಷಣೆ ಏಕೆ? ಸಾಹಿತ್ಯ ನಿರ್ಮಿತಿಯಲ್ಲಿ ಶಾಪ- ವರಗಳ ಸ್ಥಾನ ಯಾವುದು? ಶಾಪ-ವರಗಳನ್ನು ನೀಡುವುದಕ್ಕೆ ಕಾರಣಗಳು ಯಾವುವು? ಪರಿಣಾಮಗಳು ಯಾವುವು? ಶಾಪ ಅಥವಾ ವರ ಕೊಡುವ ಯೋಗ್ಯತೆ ಯಾರಿಗೆ ಯಾವ ಕಾರಣದಿಂದ ದೊರಕಿರುತ್ತದೆ? ಎಷ್ಟರಮಟ್ಟಿಗೆ ಹೊಂದಿರುತ್ತಾರೆ? ಅರ್ಹತೆಯ ಬಳಕೆಯನ್ನು ಸೂಕ್ತವಾಗಿ ಮಾಡದಿದ್ದರೆ, ಅರ್ಹತೆ ಇಲ್ಲದಾಗುತ್ತದೆಯೇ? ಇವೇ ಮೊದಲಾದ ಪ್ರಶ್ನೆಗಳು ತಲೆದೋರುತ್ತವೆ. ಇಲ್ಲಿ ಶಾಪ-ವರಗಳ ಸ್ವರೂಪವನ್ನು ತಿಳಿದುಕೊಳ್ಳುವುದು ಅವಶ್ಯಕವೆನಿಸುತ್ತದೆ.
ಮನುಷ್ಯನ ಆಸೆ-ಆಕಾಂಕ್ಷೆ, ಧ್ಯೇಯ-ಉದ್ದಿಷ್ಟಗಳು ಅತಿಯಾಗಿರುತ್ತವೆ. ಅದಕ್ಕೆ ತಕ್ಕ ಬಲ ಆತನಲ್ಲಿ ಇರುವುದೆಂತಲ್ಲ. ಕೆಲವು ಸಂದರ್ಭಗಳು ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದೂ ಆತನಿಂದ ಆಗುವುದಿಲ್ಲ. ಆಗ ಮನುಷ್ಯನು ತನಗಿಂತ ಮಿಗಿಲಾದ ಶಕ್ತಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಪೂರ್ವಕಾಲದಲ್ಲಿ ಮನುಷ್ಯನ ಅವಶ್ಯಕತೆಗಳು ಸ್ತಿಮಿತದಲ್ಲಿದ್ದವು. ಹೊಟ್ಟೆ ಬಟ್ಟೆ, ಆಸರೆ ಮತ್ತು