ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

ವಂಶವೃದ್ಧಿ ಇವಿಷ್ಟೇ ಪ್ರಾಥಮಿಕ ಅವಶ್ಯಕತೆಗಳಾಗಿದ್ದವು. ಇವನ್ನು ಪೂರೈಸುವ ಸಾಧನಗಳಾಗಲೀ, ಕ್ಷಮತೆಯಾಗಲೀ ಕಡಿಮೆ ಎಂದು ಅನ್ನಿಸಿದಾಗ ಇನ್ನಿತರ ಪೂರಕ ಸಾಧನೆಗಳನ್ನು ಆರಾಧಿಸಬೇಕಾಗುತ್ತದೆ. ಅಚೇತನವೆಂದೆನಿಸುವ ವಸ್ತುವಿನಲ್ಲಿ ಕೂಡ ಹುದುಗಿಕೊಂಡ ಸುಪ್ತಶಕ್ತಿ ಇರುತ್ತದೆ. ಆ ಶಕ್ತಿಗೆ ಚೇತನ ತರಿಸಿದರೆ ಆಸೆ-ಆಕಾಂಕ್ಷೆಗಳು ಈಡೇರಬಹುದೆಂಬ ಕಲ್ಪನೆ ದೃಢವಾಗತೊಡಗಿತು. ಈ ಸುಪ್ತಶಕ್ತಿಯನ್ನು ಚೇತರಿಸುವ ಮಾರ್ಗಗಳನ್ನು ಅರಿತುಕೊಳ್ಳುವ ಪ್ರಯತ್ನಗಳು ನಡೆದವು. ಮಂತ್ರ-ತಂತ್ರಗಳನ್ನು ಬಳಸಿ ದೈವೀ ಶಕ್ತಿಯನ್ನು ಸಾಧ್ಯ ಮಾಡಿಕೊಂಡರೆ ನಮ್ಮ ಬಯಕೆಗಳು ಈಡೇರುತ್ತವೆ ಎಂಬ ವಿಶ್ವಾಸ ಸ್ಥಿರಗೊಂಡಿತು. ಸಾಧನೆಗಳ ಉಪಯೋಗ ಮತ್ತು ಆಸೆ-ಆಕಾಂಕ್ಷೆಗಳ ಈಡೇರಿಕೆ ಇವುಗಳಲ್ಲಿಯ ಕಾರ್ಯಕಾರಣ ಸಂಬಂಧ ಅವರಿಗೆ ತಿಳಿದಿರಲಿಲ್ಲ. ಹೀಗಿದ್ದ ಕಾರಣ ಇಂಥ ಪ್ರಯತ್ನಗಳ ಬಗ್ಗೆ ಒಂದು ಬಗೆಯ ಗೂಢತೆ, ಅದ್ಭುತತೆ, ಚಮತ್ಕಾರದ ಮತ್ತು ಅತೀಂದ್ರಿಯ ಸಾಮರ್ಥ್ಯಗಳ ವಲಯ ನಿರ್ಮಾಣಗೊಂಡಿತು. ಈ ಎಲ್ಲ ಪ್ರಯತ್ನಗಳು ಐಹಿಕ ಸುಖಸಾಧನೆಗಾಗಿ ಎಂಬುದರಲ್ಲಿ ಸಂದೇಹವಿಲ್ಲ. ವಿಜ್ಞಾನಿಗಳು ಶ್ರಮಿಸುತ್ತಿರುವುದು ಕೂಡ ಇದೇ ಉದ್ದೇಶಕ್ಕಾಗಿ ಅಲ್ಲವೇ? ಹೀಗಿದ್ದರೂ ಇವೆರಡರಲ್ಲಿ ಮಹತ್ವದ ವ್ಯತ್ಯಾಸವಿದೆ. ವೈಜ್ಞಾನಿಕರ ಚಟುವಟಿಕೆಗಳು ಕಾರ್ಯ ಕಾರಣಸಂಬಂಧವನ್ನಾಧರಿಸಿರುತ್ತವೆ. ಬೇಕಿದ್ದ ಸಂಗತಿಗಳನ್ನು ಇಷ್ಟವಿದ್ದ ಪ್ರಮಾಣದಲ್ಲಿ ಯೋಗ್ಯವಾಗಿ ಬಳಸಿದರೆ, ನಿರ್ಧಾರಿತ ಫಲ ದೊರಕುವುದೆಂಬ ಭರವಸೆ ವಿಜ್ಞಾನಿಗಳಿಗೆ ಇರುತ್ತದೆ. ವಿಜ್ಞಾನಿಯು ಕಂಡುಹಿಡಿದ ಅನೇಕ ಹೊಸ ಹೊಸ ಶೋಧನೆಗಳು ಜನಸಾಮಾನ್ಯರನ್ನು ಚಕಿತಗೊಳಿಸಿವೆ. ಗೋಡೆ ಆಚೆಗಿದ್ದ ದೃಶ್ಯವು ಬರಿಗಣ್ಣಿಗೆ ಕಾಣುವುದಿಲ್ಲ; ಧ್ವನಿ ಕೂಡ ಮಂದವಾಗಿ ಕೇಳಿಬರುತ್ತದೆ. ಹೀಗಿರುವಾಗ ವಿಜ್ಞಾನಿಯು ಅತಿದೂರದ ದೃಶ್ಯವನ್ನು ಕಾಣುವಂತೆ ಮಾಡಲು ಒಂದು ಕ್ಷಣವೇ ಸಾಕು! ಇದೆಂಥ ಸೋಜಿಗ! ವಿಜ್ಞಾನಿಯು ಎಂಥ ಅಚ್ಚರಿಯ ಸಾಮರ್ಥ್ಯವನ್ನು ಸಾಧಿಸಿದ್ದಾನೆ! ಪ್ರಯತ್ನ ಸಫಲಗೊಂಡಾಗ ವೈಜ್ಞಾನಿಕನಿಗೆ ಸಂತೋಷ ಎನಿಸಿದರೂ ಚಮತ್ಕಾರವೆಂದು ಎನಿಸುವುದಿಲ್ಲ. ಕಾರ್ಯಕಾರಣ ಸಂಬಂಧವನ್ನು ಅರಿತುಕೊಂಡಿರುವುದರಿಂದಲೇ ಆತನಿಗೆ ಆಶ್ಚರ್ಯವೆನಿಸದು.
ಹಿಂದಿನ ಕಾಲದಲ್ಲಿ ಇಚ್ಛೆಯ ಪೂರ್ತಿಗಾಗಿ ಬಳಸಲ್ಪಟ್ಟ ಸಾಧನೆಗಳು ಮತ್ತು ಉದ್ದಿಷ್ಟ ಪೂರ್ತಿ ಇವುಗಳಲ್ಲಿಯ ಪರಸ್ಪರ ಸಂಬಂಧದ ಬಗ್ಗೆ ಅಜ್ಞಾನವಿತ್ತು. ಆಗ 'ಯಶಸ್ಸು ಎಂದರೆ ಚಮತ್ಕಾರ ಎಂದು ಪರಿಗಣಿಸುತ್ತಿದ್ದರು. ಮಾನವನ ಶಕ್ತಿಗೆ ಎಟುಕದಂತಹ ಕೆಲವು ವಿಷಯಗಳು ಸಾಧ್ಯವಾದಾಗ ಅದರ ಹಿಂದೆ