ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಬತ್ತಿಸುವೆ. ನಿನ್ನ ಉದರದಲ್ಲಿಯ ಜಲಚರಗಳೆಲ್ಲ ನನ್ನಿಂದ ಹತನಾಗುವವು.”
ಹೀಗೆ ನುಡಿದು ರಾಮನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿದೆ ಒಂದು ಬಾಣವನ್ನು
ಧನಸ್ಸಿಗೆ ಹೂಡಿದನು. ಬಾಣವನ್ನು ಬಿಟ್ಟ ಕ್ಷಣವೇ ಸ್ವರ್ಗ ಹಾಗೂ ಪೃಥ್ವಿಯಲ್ಲಿಯ
ಚರಾಚರಸೃಷ್ಟಿಗೆ ನಡುಕವುಂಟಾಗಿ ಭಿನ್ನವಿಚ್ಛಿನ್ನವಾಗಹತ್ತಿತು. ಮಹಾಸಾಗರದಲ್ಲಿ
ಅಲ್ಲೋಲಕಲ್ಲೋಲವಾಯಿತು. ಆಗ ಜಲಾಶಯದ ಮಧ್ಯದಿಂದ ಸಾಗರರಾಜನು
ಮೇಲಕ್ಕೆ ಎದ್ದು ಬಂದು ವಿನಯಪೂರ್ವಕವಾಗಿ ರಾಮನಿಗೆ ಇಂತೆಂದನು:
“ಹೇ ಸೌಮ್ಯರಾಮನೇ, ಈ ಪೃಥ್ವಿ, ವಾಯು, ಆಕಾಶ, ಜಲ ಮತ್ತು ಅಗ್ನಿ
ಇವು ಅನಾದಿ ಕಾಲದಿಂದಲೂ ತಮ್ಮ ತಮ್ಮ ಧರ್ಮಕ್ರಮವನ್ನು ಅನುಸರಿಸುತ್ತಲಿವೆ.
ನಾನು ಅಪಾರನಾಗಿದ್ದೇನೆ. ನನ್ನನ್ನು ದಾಟುವದು ಯಾರಿಗೂ ಸಾಧ್ಯವಿಲ್ಲ.
ಇದುವೇ ನನ್ನ ಧರ್ಮ; ಅಸ್ಥಿರತೆಯು ನನ್ನ ಪ್ರಮುಖ ವಿಕಾರವಾಗಿದೆ. ಅಭಿಲಾಷೆ,
ಲೋಭಭಯ, ಅನುರಾಗಗಳನ್ನು ಹೊಂದಿದ ಜಲಚರದಿಂದ ತುಂಬಿದ ಈ
ನನ್ನ ಉದಕವನ್ನು ಎಂದಿಗೂ ಸ್ತಬ್ಧಗೊಳಿಸಲಾರೆನು. ಹೀಗಿದ್ದರೂ ನೀನು ದಾಟಿ
ಹೋಗಲು ಏರ್ಪಾಟನ್ನು ಮಾಡುವೆ. ನಿನ್ನ ಸೇನೆಯು ದಾಟಿ ಹೋಗುವವರೆಗೆ
ಮೊಸಳೆ ಮುಂತಾದ ಜಲಚರ ಪ್ರಾಣಿಗಳು ವಾನರರ ಮೇಲೆ ದಾಳಿ ಮಾಡಲಾರ
ವೆಂದು ನಾನು ಖಂಡಿತವಾಗಿ ಹೇಳುತ್ತೇನೆ.”
ಆಗ ರಾಮನು “ಈ ಅಮೋಘವಾದ ಬಾಣವನ್ನು ಯಾವ ಪ್ರದೇಶದಲ್ಲಿ
ಎಸೆಯಲಿ?” ಎಂದು ಸಾಗರರಾಜನನ್ನು ಕೇಳಿದನು.
ಸಾಗರರಾಜನು ರಾಮನಿಗೆ, “ದ್ರುವತುಲ್ಯವೆಂದು ಜಗತ್ತಿನಲ್ಲಿ ಪ್ರಸಿದ್ಧವಾದ,
ಪವಿತ್ರವಾದ ನನ್ನ ಒಂದು ಸ್ಥಳವು ಉತ್ತರದಿಕ್ಕಿನಲ್ಲಿದೆ. ಅಲ್ಲಿ ಅಭೀರ ಪ್ರಭೃತಿ
ಮುಂತಾದ ದುಷ್ಟ ದಸ್ಯುಗಳು ನನ್ನ ಜಲವನ್ನು ಸೇವಿಸಿ ವಾಸವಿರುತ್ತಾರೆ.
ಅವರು ಬಹು ಸಂಖ್ಯೆಯಲ್ಲಿದ್ದಾರೆ. ಅವರ ಮುಖಗಳು ಭಯಂಕರವಿದ್ದಷ್ಟೇ
ಅವರ ಕೃತ್ಯಗಳೂ ಭಯಂಕರವಾಗಿವೆ. ಇಂಥ ಪಾಪಿಗಳ ಸ್ಪರ್ಶವು ನನಗೆ
ಹಿಡಿಸುವದಿಲ್ಲ. ಹೀಗಿರುವದರಿಂದ ನಿನ್ನ ಉತ್ಕೃಷ್ಟಬಾಣದ ಸದುಪಯೋಗವನ್ನು
ನೀನು ಆ ಸ್ಥಳದತ್ತ ಮಾಡು!” ಎಂದು ತಿಳಿಸಿದನು.
ಸಾಗರನ ಹೇಳಿಕೆಯಂತೆ, ರಾಮನು ಆ ತೇಜಸ್ಸುಳ್ಳ ಬಾಣವನ್ನು
'ಮರುಕಾಂತಾರ'ವೆಂಬ ಪ್ರದೇಶದ ಮೇಲೆ ಬಿಟ್ಟನು. ಆಗ ಆ ಬಾಣದಿಂದ
ತತ್ತರಿಸಿದ ಪೃಥ್ವಿಯು ಗೋಳಿಟ್ಟಿತು. ಬಾಣ ತಗುಲಿದ ಸ್ಥಳದಲ್ಲಿ ಪೃಥ್ವಿಗೆ ಒಂದು
ರಂಧ್ರವುಂಟಾಗಿ ಅಲ್ಲಿಯ ರಸಾತಳದಿಂದ ಒಮ್ಮೆಲೇ ನೀರು ಹೊರಚಿಮ್ಮಿತು.
ಅಲ್ಲಿ 'ವರಣ'ವೆಂಬ ಬಾವಿಯು ನಿರ್ಮಾಣಗೊಂಡಿತು. ಸುತ್ತುಮುತ್ತಲಿನ