ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಇಷ್ಟವಸ್ತುವನ್ನು ನಿರ್ಮಿಸುವ ಶಕ್ತಿ ಇದೆ. ಈ ಪ್ರಕಾರದ ವರವನ್ನು ವಿಶ್ವಕರ್ಮನು
ಈತನಿಗೆ ಕೊಟ್ಟಿದ್ದಾನೆ.”
“ಅತ್ಯಂತ ಉತ್ಸಾಹವುಳ್ಳ ಈ ವಾನರನು ನನ್ನ ಮೇಲೆ ಸೇತುವೆಯನ್ನು
ಕಟ್ಟಲಿ! ತನ್ನ ಪಿತನಂತೆ ನಲನು ಕುಶಲನಿದ್ದ ಕಾರಣನು ಆತನು ನಿರ್ಮಿಸಿದ್ದ
ಸೇತುವೆಗೆ ನಾನು ಆಧಾರಪ್ರಾಯನಾಗುವೆ” ಎಂದು ಹೇಳಿ ಸಾಗರ ರಾಜನು
ಅದೃಶ್ಯನಾದನು. ನಲನು ವಾನರರ ಸಹಾಯದಿಂದ ಸೇತುವೆಯನ್ನು ನಿರ್ಮಿಸ
ಲಾರಂಭಿಸಿದನು.
“ನನ್ನ ಪಿತನು ನನ್ನ ತಾಯಿಗೆ ಕೊಟ್ಟ ವರದಿಂದ ನಾನು ನನ್ನ ತಂದೆಯಂತೆ
ಶಿಲ್ಪ ವಿದ್ಯೆಯಲ್ಲಿ ಪ್ರವೀಣನಾಗಿದ್ದೇನೆ” ಎಂದು ನಲನು ಸ್ವತಃ ರಾಮನಿಗೆ
ಹೇಳುತ್ತಾನೆ.
ವರವನ್ನು ಕೊಟ್ಟ ಕಾರಣವು ಸ್ಪಷ್ಟವಿಲ್ಲ. ಇದು 'ಅಯಾಚಿತ' ವರವಾಗಿರ
ಬೇಕು.

೪೫. ವಿಶ್ವಕರ್ಮ < ನಲ (ವಾನರನ) ತಾಯಿ

ಯುದ್ಧಕಾಂಡ/೨೨

ನಲವಾನರನು ರಾಮನಿಗೆ ತನ್ನ ಸ್ವಂತದ ಬಗ್ಗೆ ಹೇಳುತ್ತಿದ್ದಾನೆ.
“ಮಹಾಸಾಗರನು ನನ್ನ ಬಗ್ಗೆ ನುಡಿದದ್ದು ನಿಜವಿದೆ. ನನ್ನ ತಂದೆಯ
ಸಾಮರ್ಥ್ಯವು ನನ್ನಲ್ಲಿರುವದರಿಂದ ನಾನು ಈ ವಿಸ್ತೀರ್ಣವಾದ ಸಮುದ್ರದಲ್ಲಿ
ಸೇತುವೆಯನ್ನು ಕಟ್ಟುವೆನು. ಈ ಪ್ರಪಂಚದಲ್ಲಿ 'ದಂಡ' ಮಾರ್ಗದಿಂದಲೇ ಪುರುಷನು
ತನ್ನ ಕಾರ್ಯವನ್ನು ಸಾಧಿಸಬಹುದು ಎಂದು ನನಗೆ ಅನ್ನಿಸುತ್ತದೆ. ಈ ಕೃತಜ್ಞನಿರ
ದವನ ಬಗ್ಗೆ ಸಾಮ, ದಾನ ಮತ್ತು ಕ್ಷಮೆ ಇವುಗಳ ಪ್ರಯೋಗವು ನಿರರ್ಥಕ;
ಸಾಗರನೆಂದರೆ ಪ್ರಚಂಡ ಜಲರಾಶಿ; ಇಂಥ ಮಹಾಸಾಗರಕ್ಕೆ ಈಗ ದಂಡದ
ಭಯವೊದಗಿದೆ. ತನ್ನ ಮೇಲೆ ಕಟ್ಟಡಲ್ಪಡಲಿರುವ ಸೇತುವೆಯನ್ನು ಕಾಣುವ ತವಕ
ಆತನಿಗೆ ಉಂಟಾಗಿದೆ. ಹೀಗಿರುವದರಿಂದಲೇ ಸೇತುವೆಯನ್ನು ಕಟ್ಟಲು
ಅವಕಾಶವನ್ನು ಕೊಡಲು ಸಿದ್ಧನಾಗಿದ್ದಾನೆ.”
ಮಮ ಮಾತುರ್ವರೋ ದತ್ತೋ ಮಂದರೇ ವಿಶ್ವಕರ್ಮಣಾ |
ಮಯಾ ತು ಸದೃಶಃ ಪುತ್ರಸ್ತವ ದೇವಿ ಭವಿಷ್ಯತಿ ‖೫೧‖