ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ದೇವ, ಗಂಧರ್ವ, ಕಿನ್ನರ ಹಾಗೂ ಮಹೋರಗ ಇವರೊಡನೆ ನಡೆದ
ಕಾಳಗದಲ್ಲಿ ಈ ಮೂವರೂ ಎಂದೂ ಪರಾಭವವನ್ನು ಪಡೆದಿರಲಿಲ್ಲವೆಂಬ
ವಾರ್ತೆಯು ಎಲ್ಲರಿಗೂ ಗೊತ್ತಿತ್ತು. ಎಲ್ಲರೂ ಅಸ್ತ್ರಗಳನ್ನು ಬಲ್ಲವರಿದ್ದು ಯುದ್ಧ
ನಿಪುಣರಿದ್ದರು. ಈ ಮೂವರೂ ಮಹಾಜ್ಞಾನಿಗಳಾಗಿದ್ದರು; ಮತ್ತು ಎಲ್ಲರಿಗೂ
ವರಗಳು ದೊರೆತಿದ್ದವು.”
ಈ ವರಗಳನ್ನು ಯಾರು ಕೊಟ್ಟರು? ಏಕೆ ಕೊಟ್ಟರು? ಅವುಗಳ ಸ್ವರೂಪ
ಯಾವುದು? ಎಂಬ ಯಾವ ಸಂಗತಿಯೂ ಸ್ಪಷ್ಟವಿಲ್ಲ. ಕೇವಲ 'ವರಗಳು
ದೊರೆತಿದ್ದವು' ಎಂಬ ಉಲ್ಲೇಖ ಮಾತ್ರ ಇದೆ.

ಯುದ್ಧಕಾಂಡ/೭೧

ರಣಭೂಮಿಯಲ್ಲಿ ವಾಲೀಪುತ್ರನಾದ ಅಂಗದನು ನರಾಂತಕನನ್ನು ಮತ್ತು
ಹನುಮಂತನು ದೇವಾಂತಕನನ್ನು ವಧಿಸಿದರು. ತನ್ನ ಪ್ರಚಂಡ ಸೈನ್ಯದ ದುರಂತವನ್ನು
ಕಂಡು ಇಂದ್ರಸಮರಾದ ಬಂಧುಬಾಂಧವರ ವಧೆಯಾದುದನ್ನು ಕಂಡು
ಅತಿಕಾಯನು ಬಹಳೇ ರೋಷಗೊಂಡನು.
ಚಕೋಪ ಚ ಮಹಾತೇಜಾ ಬ್ರಹ್ಮದತ್ತವರೋ ಯುಧಿ |
ಅತಿಕಾಯೋsದ್ರಿಸಂಕಾಶೋ ದೇವದಾನವದರ್ಪಹಾ ‖೩‖

ಈ ಅತಿಕಾಯನು ಬ್ರಹ್ಮದೇವನಿಂದ ವರವನ್ನು ಪಡೆದಿದ್ದನು. ಪರ್ವತದಷ್ಟು
ವಿಶಾಲ ಶಾರೀರವುಳ್ಳವನಾಗಿದ್ದ ಆತನು ದೇವದಾನವರ ಗರ್ವವನ್ನು ಭಂಗಗೊಳಿಸು
ವವನಾಗಿದ್ದನು.
ಇಲ್ಲಿಯೂ ಬ್ರಹ್ಮದೇವನು ಅತಿಕಾಯನಿಗೆ ಯಾವ ಬಗೆಯ ವರವನ್ನು
ಕೊಟ್ಟನೆಂಬುದರ ಮಾಹಿತಿ ಇಲ್ಲ. ವರವನ್ನು ಕೊಟ್ಟ ಉಲ್ಲೇಖ ಮಾತ್ರ ಬಂದಿದೆ.
ಈ ಅತಿಕಾಯನನ್ನು ಕಂಡ ಕ್ಷಣವೇ ವಾನರರು ಹೆದರಿಕೊಂಡರು; ಅವರ
ಜಂಘಾಬಲವೇ ಉಡುಗಿತು. ಅವರು ರಾಮನಿಗೆ ಶರಣು ಹೋದರು. ಈ
ಅತಿಕಾಯನನ್ನು ಕಂಡ ರಾಮನಿಗೂ ವಿಸ್ಮಯವೆನಿಸಿತು. ರಾಮನು ಈತನ ಬಗ್ಗೆ
ವಿಭೀಷಣನಿಗೆ ಕೇಳಿದನು. ಆಗ ವಿಭೀಷಣನು: “ಶಕ್ತಿಬಲದಲ್ಲಿ ರಾವಣನಿಗೆ
ಈತನು ಸರಿಸಮಾನವಾದ 'ಅತಿಕಾಯ' ಹೆಸರಿನ ರಾವಣನ ಪುತ್ರನಾಗಿದ್ದಾನೆ.
ಈತನು ಅಸ್ತ್ರಪಾರಂಗತದಲ್ಲಿ ಶ್ರೇಷ್ಠನಾಗಿದ್ದಾನೆ. ಶಕ್ತಿ ಬಲದಲ್ಲಿ ಬಲದಲ್ಲಿ
ಖ್ಯಾತನಿದ್ದಾನೆ. ಈತನು ಯುದ್ಧ ನಿಪುಣನಿದ್ದಾನೆ.