ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೪೯. ಇಂದ್ರ < ರಾಮ

ಯುದ್ಧಕಾಂಡ/೧೦೨

ರಾಮ ರಾವಣರಲ್ಲಿಯ ಯುದ್ಧಪ್ರಸಂಗದಲ್ಲಿ ರಾವಣನು ರಥಾರೂಢನಾಗಿದ್ದನು. ರಾಮನು ಭೂಮಿಯ ಮೇಲೆ ನಿಂತು ರಾವಣನತ್ತ ಬಾಣಗಳನ್ನು ಬಿಡುತ್ತಿದ್ದನು. ದೇವ, ಗಂಧರ್ವ ಕಿನ್ನರರು ಇದನ್ನು ಅವಲೋಕಿಸಿ ಇಂದ್ರನಿಗೆ:

“ಭೂಮಿಯ ಮೇಲೆ ನಿಂತು ಯುದ್ಧ ಮಾಡುವ ರಾಮ ಮತ್ತು ರಥಾ ರೂಢನಾಗಿದ್ದ ರಾಕ್ಷಸ ಇವರಲ್ಲಿಯಯುದ್ಧವು ಸರಿಸಮಾನವಲ್ಲ” ಎಂದರು. ಆಗ ಇಂದ್ರನು ತನ್ನ ಸಾರಥಿಯಾದ 'ಮಾತಲಿ'ಗೆ “ನನ್ನ ರಥವನ್ನು ತೆಗೆದುಕೊಂಡು ಭೂಮಿಯಮೇಲೆ ರಘುವಂಶದ ಶ್ರೇಷ್ಠ ರಾಮನಿದ್ದಲ್ಲಿಗೆ ಕೂಡಲೇ ನೀನು ಹೋಗು! ಆತನನ್ನು ಬರಮಾಡಿಕೊಂಡು ದೇವತೆಗಳ ಹಿತವನ್ನು ಸಾಧಿಸು!” ಎಂದನು.

ಇಂದ್ರನ ಸುಸಜ್ಜಿತ ವಿಜಯಶಾಲಿಯಾದ ರಥವನ್ನು ತೆಗೆದುಕೊಂಡು 'ಮಾತಲಿ' ಸಾರಥಿಯು ರಣರಂಗಕ್ಕೆ ಬಂದು ಕೈಗಳನ್ನು ಮುಗಿದು ರಾಮನಿಗೆ ಇಂತೆಂದನು:

ಸಹಸ್ರಾಕ್ಷೇಣ ಕಾಕುತ್ಸ್ಥ ರಥೋಯಂ ವಿಜಯಾಯ ತೇ |
ದತ್ತಸ್ತವ ಮಹಾಸತ್ತ್ವ ಶ್ರೀಮಂಶತೃನಿಬರ್ಹಣ ‖೧೪‖
ಇದಮೈಂದ್ರಂ ಮಹಚ್ಚಾಪಂ ಕವಚಂ ಚಾಗ್ನಿಸಂನಿಭಮ್ |
ಶರಾಶ್ಚಾದಿತ್ಯಸಂಕಾಶಾಃ ಶಕ್ತಿಶ್ಚ ವಿಮಲಾ ಶಿವಾ ‖೧೫‖

“ಹೇ, ಮಹಾಸತ್ವಶಾಲಿಯೇ, ಕಾಕುತ್ಸ್ಥಕುಲೋತ್ಪನ್ನನೇ, ಶತ್ರುಸಂಹಾರಕನೆ, ಇಂದ್ರನು ಈ ರಥವನ್ನು ನಿನಗೆ ಜಯವಾಗಲಿ ಎಂದು ಕಳುಹಿದ್ದಾನೆ. ಈ ಪ್ರಚಂಡ ಧನುಸ್ಸನ್ನು, ಅಗ್ನಿಯಂತೆ ಹೊಳೆಯುತ್ತಿರುವ ಕವಚವನ್ನು, ಸೂರ್ಯ ಕಿರಣಗಳಂತೆ ತೇಜಸ್ಸುಳ್ಳ ಬಾಣಗಳನ್ನು ಮತ್ತು ಶುಭಕಾರಕವಾದ ನಿರ್ಮಲ ಶಕ್ತಿಯನ್ನು ನಿನಗಾಗಿ ಕಳುಹಿದ್ದಾನೆ. ನೀನು ಈ ರಥವನ್ನೇರು! ನಾನು ನಿನ್ನ ಸಾರಥಿಯಾಗುತ್ತೇನೆ. ನೀನು ಈ ರಾಕ್ಷಸನಾದ ರಾವಣನನ್ನು ವಧಿಸು!”

ರಾಮನು ಇಂದ್ರನಿಂದ ದೊರೆತ ಎಲ್ಲ ಸಾಮಗ್ರಿಗಳನ್ನು ಸ್ವೀಕರಿಸಿ ರಥಾ
ರೂಢನಾದನು.