ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಹೇ ಪುರಂದರನೇ, ಪರಾಕ್ರಮಿಗಳಾದ, ವೀರರಾದ, ಮೃತ್ಯುವಿನ ಭಯವನ್ನರಿಯದ
ಈ ವಾನರರು ಯುದ್ಧದಲ್ಲಿ ಶ್ರಮಿಸಿ ಮರಣವನ್ನಪ್ಪಿದ್ದಾರೆ; ಅಂಥ ಇವರನ್ನು
ನೀನು ಸಜೀವಗೊಳಿಸು! ನನಗೆ ಇಷ್ಟವಿದ್ದುದನ್ನು ಮಾಡಲು ಆತುರರಾಗಿದ್ದ
ಮತ್ತು ಮರಣವನ್ನೆದುರಿಸಿದ ಈ ವಾನರರು ನಿನ್ನ ಕೃಪೆಯಿಂದ ಸ್ವಬಾಂಧವರನ್ನು
ಕಾಣುವಂತೆ ಆಗಲಿ. ಈ ಬಗೆಯ ವರವನ್ನು ನಾನು ಬೇಡುತ್ತಿದ್ದೇನೆ. ಹೇ ಸನ್ಮಾನ್ಯನೇ,
ಗೋಲಾಂಗುಲ ಮತ್ತು ಋಕ್ಷ ಇವರಿಗೆ ಯಾವ ಪೀಡೆಯೂ ಇರಕೂಡದು.
ಇವರಿಗೆ ಯಾವ ವ್ರಣಗಳೂ ಆಗಬಾರದು. ಇವರೆಲ್ಲರೂ ಬಲ ಮತ್ತು ಪರಾಕ್ರಮ
ಗಳಿಂದ ಸಂಪನ್ನರಾಗಿರುವದನ್ನು ಕಾಣಬೇಕೆಂಬ ಆಸೆ ನನ್ನದಿದೆ. ವಾನರರು
ವಾಸವಾಗಿದ್ದ ಪ್ರದೇಶದಲ್ಲಿ ಸದಾವಕಾಲದಲ್ಲಿ ಹೂ, ಹಣ್ಣು, ಕಂದಮೂಲಗಳು
ವಿಪುಲವಾಗಿರಬೇಕು. ನಿರ್ಮಲ ಜಲದ ನದಿಗಳು ಹರಿಯುತ್ತಿರಬೇಕು.
ಈ ಬೇಡಿಕೆಯನ್ನು ಕೇಳಿಕೊಂಡ ಇಂದ್ರನು: “ರಘೋತ್ತಮನೇ, ನೀನು
ಇಚ್ಛಿಸುವ ವರವು ಬಹು ದೊಡ್ಡದಾಗಿದೆ. ಹೀಗಿದ್ದರೂ ನಾನು ಮಾತು ಕೊಟ್ಟಿರು
ವದರಿಂದ ಅದನ್ನು ನಿರಾಕರಿಸಲಾರೆನು. ನಿನ್ನ ಇಷ್ಟಾರ್ಥವು ಪೂರ್ತಿಗೊಳ್ಳುವುದು”
ಎಂದನು.
“ವರಮೇತಮಹಂ ವೃಣೇ”- “ಈ ವರವನ್ನು ನಾನು ಬೇಡುತ್ತಿದ್ದೇನೆ”
ಎಂದು ರಾಮನು ನುಡಿದಿದ್ದರೂ ಈ ವರವು 'ಅಯಾಚಿತ'ವಾಗಿದೆ. ಇಂದ್ರನೇ
ರಾಮನಿಗೆ ಈ ವರವನ್ನು ಬೇಡಲು ಹೇಳಿದ್ದನು.

ಯುದ್ದಕಾಂಡ/೧೨೪

ವನವಾಸವನ್ನು ಪೂರೈಸಿದ ನಂತರ ರಾಮನು ಭರದ್ವಾಜ ಮುನಿಯ
ಆಶ್ರಮಕ್ಕೆ ಬಂದಾಗ ರಾಮನು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಭರದ್ವಾಜನು
ಈ ರೀತಿ ಉಲ್ಲೇಖಿಸಿದ್ದಾನೆ.
ಯಥಾ ಚ ನಿಹತೇ ತಸ್ಮಿನ್ರಾವಣೇ ದೇವಕಂಟಕೇ |
ಸಮಾಗಮಶ್ಚ ತ್ರಿದಶೈರ್ಯಥಾ ದತ್ತಶ್ಚ ತೇ ಮರಃ ‖೧೫‖

“ದೇವತೆಗಳಿಗೆ ಕಂಟಕಪ್ರಾಯನಾದ ರಾವಣನನ್ನು ನೀನು ವಧಿಸಿದ ನಂತರ
ದೇವತೆಗಳು ನಿನ್ನನ್ನು ಭೇಟಿಯಾಗಿ ವರಗಳನ್ನು ಕೊಟ್ಟ ವಿಷಯವನ್ನು ತಪಸ್ಸಿನ
ಬಲದಿಂದ ನಾನು ಅರಿತುಕೊಂಡೆನು” ಎಂದು ಆ ಮುನಿಯ ಹೇಳಿದನು.