ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಜಲವನ್ನು ನಿರ್ಮಿಸಿದನು: ಮತ್ತು ಅದನ್ನು ರಕ್ಷಿಸಲೋಸುಗ ಪ್ರಾಣಿಗಳನ್ನು
ಸೃಷ್ಟಿಸಿದನು. ಹಸಿವೆ, ಬಾಯಾರಿಕೆ ಮತ್ತು ಭಯ ಇವುಗಳಿಂದ ಪ್ರಾಣಿಗಳು ಸಂಕಟಕ್ಕೆ
ಒಳಗಾದಾಗ 'ನಾವು ಯಾವ ರೀತಿ ವರ್ತಿಸಬೇಕು?' ಎಂದು ಪ್ರಜಾಪತಿಯನ್ನು
ಪ್ರಶ್ನಿಸಿಯಾಯಿತು. ಆಗ ಪ್ರಜಾಪತಿಯು ಅವರಿಗೆ “ನೀವು ಉದಕದ ರಕ್ಷಣೆಯನ್ನು
ಮಾಡಿರಿ” ಎಂದು ಹೇಳಿದನು. 'ರಕ್ಷಾಮಃ' ಎಂದು ಉತ್ತರಿಸಿದವರು ರಾಕ್ಷಸರಾದರು;
'ಯಕ್ಷಾಮಃ' ಎಂದವರು ಯಕ್ಷರಾದರು.
ಹೇತಿ ಮತ್ತು ಪ್ರಹೇತಿ ಎಂಬ ರಾಕ್ಷಸಾಧಿಪತಿಗಳಿದ್ದರು. ಧರ್ಮನಿಷ್ಠನಿದ್ದ
ಪ್ರಹೇತಿಯು ತಪೋವನಕ್ಕೆ ಹೋದನು. 'ಹೇತಿ'ಯು ಕಾಲನ ತಂಗಿಯಾದ
'ಮಾಯಾ' ಇವಳನ್ನು ವಿವಾಹವಾದನು. ಈ ದಂಪತಿಗಳ ಪುತ್ರನಂದರೆ 'ವಿದ್ಯುತ್ಕೇಶ'.
ಈ ವಿದ್ಯುತ್ಕೇಶನು ಯೌವನಸಂಪನ್ನನಾದ ನಂತರ ಈತನ ವಿವಾಹವನ್ನು 'ಸಂಧ್ಯಾ'ಳ
ಕನ್ಯೆಯಾದ 'ಸಾಲಕಟಂಕಟಾ' ಇವಳೊಡನೆ ಮಾಡಿದರು. ಈ ವಿದ್ಯುತ್ಕೇಶ ರಾಕ್ಷಸನು
ಅವಳೊಡನೆ ಇಂದ್ರನಂತೆ ಸರಸವಾಡುತ್ತಿದ್ದನು. ಅವಳು ಗರ್ಭವತಿಯಾದ ನಂತರ
ಯಥಾಕಾಲ ಮಂದಾರ ಪರ್ವತದ ಮೇಲೆ ಪ್ರಸೂತಳಾದಳು; ಮತ್ತು ಆ
ಕಂದನನ್ನು ಅಲ್ಲಿಯೇ ಬಿಟ್ಟು ಪುನಃ ತನ್ನ ಪತಿಯೊಡನೆ ಸರಸಸಲ್ಲಾಪ ರತಿಗಳಲ್ಲಿ
ಕಳೆಯಹತ್ತಿದಳು. ಆಗ ಆಕಾಶಮಾರ್ಗದಿಂದ ಉಮೆಯೊಡನೆ ಸಂಚರಿಸುತ್ತಿದ್ದ
ಶಂಕರನಿಗೆ ಈ ತ್ಯಜಿಸಲ್ಪಟ್ಟ ಬಾಲಕನ ಅಳುವ ಧ್ವನಿಯು ಕೇಳಿಬಂದಿತು;
ಪಾರ್ವತಿಗೂ ಕನಿಕರವೆನಿಸಿತು. ಅವಳು ಶಂಕರನಿಗೆ ಪ್ರಾರ್ಥಿಸಿದಳು. ಆಗ-
ತಂ ರಾಕ್ಷಸಾತ್ಮಜಂ ಚಕ್ರೇ ಮಾತುರೇವ ವಯಃಸಮಮ್ |
ಅಮರಂ ಚೈವ ತಂ ಕೃತ್ವಾ ಮಹಾದೇವೋsಕ್ಷರೋsವ್ಯಯಃ ‖೨೯‖

"ಸ್ವಂತದ ಗೌರವಕ್ಕೆ ಕುಂದನ್ನು ಬರಗೊಡದ, ಅವಿನಾಶಿಯಾದ ಮಹಾ
ದೇವನು ಆ ರಾಕ್ಷಸಪುತ್ರನಿಗೆ ಅಮರತ್ವವನ್ನು ಕೊಟ್ಟನು; ತತ್‌ಕ್ಷಣ ಆ ಎಳೆಯ
ಮಗುವಿನ ಪ್ರಾಯವು ತಾಯಿಯಷ್ಟೇ ಆಗುವಂತೆ ಮಾಡಿದನು." ಅದಲ್ಲದೇ
ಪಾರ್ವತಿಯನ್ನು ಸಂತೋಷಗೊಳಿಸಲು ಆತನಿಗೆ ಆಕಾಶದಲ್ಲಿ ಸಂಚರಿಸುವ
ನಗರವನ್ನು ಕೊಟ್ಟನು. ಈ ರೀತಿ ತ್ಯಜಿಸಲ್ಪಟ್ಟ ಕಂದನೆಂದರೆ ರಾಕ್ಷಸಪುತ್ರನಾದ
ಸಂಕೇಶನು.
ಆಕಾಶದಲ್ಲಿ ಸಂಚರಿಸುವ ನಗರವು ಮಹಾದೇವನ ಅನುಗ್ರಹವಿದ್ದು ಅದು
ವರಸ್ವರೂಪವಲ್ಲ.