ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅಮಾತ್ಯರು ರಾವಣನಿಗೆ ಶಂಕರನನ್ನು ಒಲಿಸಿಕೊಳ್ಳುವಂತೆ ಸಲಹೆಯಿತ್ತರು.
ಆಗ ರಾವಣನು ಹಲವಾರು ರೀತಿಯಲ್ಲಿ ಶಿವನನ್ನು ಸ್ತುತಿಸಿ ಆತನಿಗೆ ಶರಣು
ಹೋದನು. ಕೈಗಳೆರಡೂ ಅದುಮಿಕೊಂಡಿದ್ದ ಸ್ಥಿತಿಯಲ್ಲಿ ರಾವಣನು ಒಂದು
ಸಹಸ್ರ ವರ್ಷಗಳವರೆಗೆ ಶಿವನನ್ನು ಸ್ತುತಿಸಿದ ನಂತರ ಆತನ ಕೈಗಳು ಬಿಡುಗಡೆ
ಹೊಂದಿದವು. ಶಿವನು ಸಂತೋಷಗೊಂಡನು. ರಾವಣನ ಎರಡೂ ಕೈಗಳು
ಪರ್ವತದಡಿಯಲ್ಲಿ ಸಿಲುಕಿಕೊಂಡಾಗ ಆತನ ಅತಿ ಭಯಂಕರ ಆಕ್ರೋಶದಿಂದ
ತೈಲೋಕ್ಯವೆಲ್ಲ ರಾವಿತವಾಯಿತು. (ನಿನಾದಿಸಿತು). ಆ ಕಾರಣ ಇನ್ನು ಮುಂದೆ
'ನೀನು ರಾವಣನೆಂದು ಖ್ಯಾತಿಪಡೆಯುವೆ' ಎಂದು ಶಂಕರನು ಹೇಳಿದನು.
'ಇನ್ನು ನೀನು ಸ್ಥಾನಕ್ಕೆ ಮರಳು' ಎಂದು ಅಪ್ಪಣೆಯಿತ್ತನು. ಆಗ ರಾವಣನು
ಶಂಕರನಿಗೆ-
ಪ್ರೀತೋ ಯದಿ ಮಹಾದೇವ ವರಂ ಮೇ ದೇಹಿ ಯಾಚತಃ ‖೪೦‖

ವರವನ್ನು ಮಹಾದೇವನೇ, ನೀನು ಪ್ರಸನ್ನನಾಗಿದ್ದರೆ ಯಾಚಕನಾದ ನನಗೆ
ಒಂದು ವರವನ್ನು ಕರುಣಿಸು! ದೇವ, ಗಂಧರ್ವ, ದಾನವ, ರಾಕ್ಷಸ, ಗುಹ್ಯಕ,
ನಾಗ ಮತ್ತು ಇನ್ನಿತರ ಬಲಾಢ್ಯ ಪ್ರಾಣಿಗಳಿಂದ ನನಗೆ ಯಾವ ಭಯವೂ
ಇರುವದಿಲ್ಲ ಎಂಬ ವರವನ್ನು ಪಡೆದಿದ್ದೇನೆ. ಹೇ ದೇವನೇ, ಮನುಷ್ಯರಂಥ
ಕ್ಷುದ್ರಜೀವಿಗಳ ಪರಿವೆ ನನಗೆ ಇರುವದಿಲ್ಲ. ಬ್ರಹ್ಮದೇವನಿಂದ ನಾನು ದೀರ್ಘ
ಆಯುಸ್ಸನ್ನು ಪಡೆದುಕೊಂಡಿದ್ದೇನೆ. ಆದರೆ-
ವಾಂಛಿತಂ ಚಾಯುಷಃ ಶೇಷಂ ಶಸ್ತ್ರಂ ತ್ವಂ ಚ ಪ್ರಯಚ್ಛ ಮೇ ‖೪೩‖

“ಇನ್ನು ಮಿಕ್ಕಿ ಉಳಿದ ಆಯುಸ್ಸನ್ನು ನಾನು ಪೂರ್ಣ ಉಪಭೋಗಿಸಬೇಕು;
ಶಾಪಾದಿಗಳ ಮೂಲ ಅದು ಕಡಿಮೆಯಾಗಬಾರದು ಎಂಬ ಇಚ್ಛೆಯು ನನ್ನದಾಗಿದೆ.
ಈ ರೀತಿಯ ಅವಶಿಷ್ಟ ಆಯುಸ್ಸನ್ನು ಮತ್ತು ಶಸ್ತ್ರವನ್ನು ನನಗೆ ಕೊಡು!”
ಈ ಬಗೆಯ ರಾವಣನ ಯಾಚನೆಯನ್ನು ಶಂಕರನು ಒಪ್ಪಿಕೊಂಡು
ರಾವಣನಿಗೆ “ಚಂದ್ರಹಾಸ'ವೆಂಬ ಖಡ್ಗವನ್ನು ಕೊಟ್ಟನು. ಆತನ ಕೋರಿಕೆಯ
ಆಯುಸ್ಸನ್ನೂ ಕೊಟ್ಟನು. ಶಂಕರನು ಮುಂದೆ ಈ ರೀತಿ ನುಡಿದನು: “ನೀನು
ಈ ಶಸ್ತ್ರಕ್ಕೆ ಅವಮಾನಿಸಬೇಡ! ನಿನ್ನಿಂದ ಅವಮಾನ ನಡೆದರೆ ಈ ದೈದೀಪ್ಯಮಾನ
ಖಡ್ಗವು ನನ್ನತ್ತ ಮರಳಿ ನನ್ನ ಕೈಸೇರುವುದೆಂಬುದರಲ್ಲಿ ಸಂಶಯವಿಲ್ಲ.”