ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಿನ್ನ ಪ್ರಾಣವು ಬೇಡಾಗಿದ್ದರೆ ನನ್ನೊಡನೆ ಯುದ್ಧ ಮಾಡು!” ಎಂದು ಮಾಂಧಾತ
ರಾಜನು ಪ್ರತ್ಯುತ್ತರಿಸಿದನು. ಇಬ್ಬರಿಗೂ ತುಮುಲ ಯುದ್ಧವು ನಡೆಯಿತು. ವಿವಿಧ
ಪ್ರಕಾರದ ಶಸ್ತ್ರಾಸ್ತ್ರಗಳನ್ನು ಇಬ್ಬರೂ ಬಳಸಿದರು. ಸಮಸ್ತ ಪ್ರಾಣಿಮಾತ್ರಕ್ಕೂ ಭಯಂಕಾರಿ
ಯಾದ ದಿವ್ಯ, ಪ್ರಚಂಡ ಪಾಶುಪತಾಸ್ತ್ರವನ್ನು ಅಭಿಮಂತ್ರಿಸಲು ಮಾಂಧಾತನು
ಆರಂಭಿಸಿದಾಗ, ಆ ಅಸ್ತ್ರವನ್ನು ಕಂಡ ಪ್ರಾಣಿಗಳೆಲ್ಲ ದಿಕ್ಕೆಟ್ಟವು.”
ವರದಾನಾತ್ತು ರುದ್ರಸ್ಯ ತಪಾಸಾರಾಧಿತಮ್ ಮಹತ್ |
ತತಃ ಸಂಕಂಪತೇ ಸರ್ವ ತ್ರೈಲೋಕ್ಯಂ ಸಚರಾಚರಮ್ ‖೫೪‖
ದೇವಾಃ ಸಂಕಂಪಿತಾಃ ಸರ್ವೇ ಲಯಂ ನಾಗಾಶ್ಚ ಸಂಗತಾಃ ‖೫೫‖

ತಪಸ್ಸಿನಿಂದ ರುದ್ರನ ವರವನ್ನು ಪಡೆದ ಕಾರಣ ಮಾಂಧಾತನಿಗೆ ಆ
ಶಸ್ತ್ರವು ಲಭಿಸಿತ್ತು. ಈ ಪ್ರಖರವಾದ ಅಸ್ತ್ರದ ಪ್ರಭಾವದಿಂದ ಎಲ್ಲ ಚರಾಚರ
ಪ್ರಾಣಿಗಳನ್ನೊಳಗೊಂಡ ತ್ರೈಲೋಕ್ಯವು ನಡುಗಹತ್ತಿತು; ಅಲ್ಲದೆ ನಾಗಾದಿಗಳು
ಲಯವಾಗಹತ್ತಿದರು.
ಪುಲಸ್ತ್ಯ ಮತ್ತು ಗಾಲವ ಎಂಬ ಶ್ರೇಷ್ಠ ಮುನಿಗಳು ಸಮಾಧಿಬಲದಿಂದ
ಈ ಸ್ಥಿತಿಯನ್ನು ಅರಿತುಕೊಂಡು ಮಾಂಧಾತರಾಜನನ್ನು ನಿರೋಧಿಸಿದರು.
ರಾಕ್ಷಸಶ್ರೇಷ್ಠ ರಾವಣನಿಗೂ ಹಲವಾರು ರೀತಿಯಲ್ಲಿ ನಿರ್ಭತ್ಸನೆ ಮಾಡಿ ಆತನಿಗೂ
ಯುದ್ಧದಿಂದ ಪರಾವೃತ್ತಗೊಳಿಸಿದರು.
ಈ ಸಂದರ್ಭದಲ್ಲಿ ವರ ದೊರೆತ ಉಲ್ಲೇಖ ಮಾತ್ರವಿದೆ. ರುದ್ರನು ಯಾವ
ವರವನ್ನು ಕೊಟ್ಟಿದ್ದನೆಂಬುದು ನಿಚ್ಚಳವಿಲ್ಲ. ತಪೋಬಲದಿಂದ ವರ ದೊರೆತ
ಕಾರಣ ಇದು 'ಯಾಚಿತ' ವರವಿರಬೇಕು.*

೬.೪. ಮಹೇಶ್ವರ < ಮೇಘನಾದ (ಇಂದ್ರಜಿತು)

ಉತ್ತರಕಾಂಡ/೨೫

ಅಗಸ್ತ್ಯ ಮುನಿಯು ರಾಮನಿಗೆ, ಮೇಘನಾದನಿಗೆ ಮಹೇಶ್ವರನಿಂದ ದೊರೆತ
ವರದ ಸಮಾಚಾರವನ್ನು ಹೇಳುತ್ತಿದ್ದಾನೆ.

——————
* ಈ ಸರ್ಗವು ಗೀತಾ ಪ್ರೆಸ್ (ಗೋರಖಪುರ) ಪ್ರತಿಯಲ್ಲಿ ಇರುವದಿಲ್ಲ. ಸರ್ಗ ೨೩, ೨೪ರಲ್ಲಿ
ಐದು ಪ್ರಕ್ಷಿಪ್ತ ಸರ್ಗಗಳ ಅನುವಾದವನನು ಕೈಕಾಶಿನಾಥಶಾಸ್ತ್ರೀ ಲೀಲೆಯವರು ಕೊಟ್ಟಿದ್ದಾರೆ.