ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಗೊತ್ತಿರದ ಈ ಧನುಸ್ಸು ಮತ್ತು ರಣರಂಗದಲ್ಲಿ ಶತ್ರುವನ್ನು ಧ್ವಂಸಗೊಳಿಸುವ
ಒಂದು ಪ್ರಚಂಡ ಅಸ್ತ್ರ- ಇವೆಲ್ಲವೂ ವರದಾನವಾಗಿ ನಿನಗೆ ದೊರೆತಿವೆ”
ಎಂದನು.
“ಈಗ ಮೇಘನಾದನು ನಿನ್ನ ಆಗಮನವನ್ನು ಕಾಯುತ್ತಿದ್ದಾನೆ. ನನ್ನ
ಉದ್ದೇಶವೂ ಇದೇ ಆಗಿದೆ” ಎಂದು ಉಶನಾ ತಪಸ್ವಿಯು ರಾವಣನಿಗೆ ತಿಳಿಸಿದನು.
ಮೇಘನಾದನ ಕಾಯಕವು ರಾವಣನಿಗೆ ಅಷ್ಟೊಂದು ಹಿಡಿಸಲಿಲ್ಲ. ಏಕೆಂದರೆ
ಯಜ್ಞ ಮಾಡುವಾಗ ದ್ರವ್ಯರೂಪದಿಂದ ಇಂದ್ರಪ್ರಭೃತಿ ಶತ್ರುಗಳನ್ನು ಪೂಜಿಸಿ
ದಂತಾಯಿತು! ಆದರೂ ಆದದ್ದು ಆಗಿಹೋಯಿತು ಎಂದು ರಾವಣನು ತನ್ನಷ್ಟಕ್ಕೆ
ಸಮಾಧಾನ ಮಾಡಿಕೊಂಡನು.
ವರಪ್ರಾಪ್ತಿಗೆಂದು ಯಜ್ಞಕರ್ಮವನ್ನು ಆಚರಿಸಿದ ಕಾರಣ ಈ ವರವು
'ಯಾಚಿತ' ವರವಾಗಿದೆ. ದಿವ್ಯರಥ, ಯಾವಾಗಲೂ ಬಾಣಗಳಿಂದ ತುಂಬಿದ
ಬತ್ತಳಿಕೆ, ಧನುಸ್ಸು ಇವುಗಳು ವರವಾಗಿರದೆ ಅನುಗ್ರಹರೂಪವೆಂದೆನ್ನಬಹುದು.
ವಾಲ್ಮೀಕಿಯು ಮಾತ್ರ ಇವುಗಳಿಗೆ ವರವೆಂದಿದ್ದಾನೆ.

೬೫. ಬ್ರಹ್ಮದೇವ < ಮೇಘನಾದ (ಇಂದ್ರಜಿತು)

ಉತ್ತರಕಾಂಡ/೩೦

ಮೇಘನಾದನಿಗೆ ಇಂದ್ರಜಿತು ಎಂಬ ನಾಮಾಭಿದಾನವು ಹೇಗಾಯಿತು?
ಮತ್ತು ಇಂದ್ರನನ್ನು ಮುಕ್ತಗೊಳಿಸಲು ಬ್ರಹ್ಮದೇವನು ಮೇಘನಾದನಿಗೆ ಯಾವ
ವರವನ್ನು ಕೊಟ್ಟನು? ಎಂಬುದನ್ನು ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಿದ್ದಾನೆ.
“ಇಂದ್ರನನ್ನು ಯುದ್ಧದಲ್ಲಿ ಪರಾಭವಗೊಳಿಸಿ ಆತನನ್ನು ಮೇಘನಾದನು
ಲಂಕೆಗೆ ಸೆರೆಯೊಯ್ದನು. ಆಗ ಇಂದ್ರನನ್ನು ಮುಕ್ತಗೊಳಿಸಲೋಸುಗ
ದೇವತೆಗಳೆಲ್ಲರೂ ಬ್ರಹ್ಮದೇವನ ಹಿರಿತನದಲ್ಲಿ ಲಂಕೆಗೆ ಹೋದರು. ಪುತ್ರ ಹಾಗೂ
ಬಾಂಧವರನ್ನೊಳಗೊಂಡ ರಾವಣನನ್ನು ಕಂಡು ಬ್ರಹ್ಮದೇವನು ಅತಿಸೌಮ್ಯ
ಶಬ್ದಗಳಲ್ಲಿ ರಾವಣನಿಗೆ ಈ ರೀತಿ ಕೇಳಿದನು. 'ಹೇ ವತ್ಸ ರಾವಣನೆ, ರಣರಂಗದಲ್ಲಿ
ನಿನ್ನ ಪುತ್ರನ ಶೂರತನವನ್ನು ಕಂಡು ನಾನು ಬಲು ಸಂತೋಷಗೊಂಡಿದ್ದೇನೆ.
ಈ ನಿನ್ನ ಪುತ್ರನು ನಿನಗೆ ಸಮಬಲನಾಗಿರುವನು. ಸ್ವಸಾಮರ್ಥ್ಯದಿಂದ ನೀನು
ಮೂರು ಲೋಕಗಳನ್ನು ಜಯಿಸಿ ನಿನ್ನ ಪ್ರತಿಜ್ಞೆಯನ್ನು ಸಫಲ ಮಾಡಿಕೊಂಡಿರುವೆ.
ಹೀಗಿರುವದರಿಂದ ಪುತ್ರನ ಸಮೇತ ನಿನ್ನ ಬಗ್ಗೆ ಹೆಮ್ಮೆಯಿಂದ ಪ್ರಸನ್ನನಾಗಿದ್ದೇನೆ.”