ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸೃಷ್ಟಿಯ ನಿರ್ಮಿತಿಯಲ್ಲಿ ಮೊದಲನೇ ಕರ್ಮವೆಂದರೆ ಯಜ್ಞ ಯಜ್ಞದಿಂದ ಸಮಾಜದ ಪಾಲನೆ-ಪೋಷಣೆ ನಡೆಯುತ್ತದೆ. ಋಗ್ವೇದದಲ್ಲಿ
“ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್”

ಎಂದು ಹೇಳಲಾಗಿದೆ. ಐಹಿಕ ಸುಖಸಮೃದ್ಧಿಗಾಗಿ ವೈಯಕ್ತಿಕವಾಗಿ ಯಜ್ಞ ಗಳನ್ನಾಚರಿಸುತ್ತಿದ್ದಂತೆ ಹಲವು ಯಜ್ಞಗಳು ಸಮಾಜಕಲ್ಯಾಣಕ್ಕಾಗಿ ನಡೆಯುತ್ತಿದ್ದವು. ಯಜ್ಞದಿಂದ ಬಹಳಷ್ಟು ಜನರಿಗೆ ಲಾಭವಾಗುತ್ತಿತ್ತು. ಕುಟುಂಬ, ಸಮಾಜ, ದೇಶ, ರಾಜ್ಯ ಮತ್ತು ವಿಶ್ವ ಇವುಗಳ ಕಲ್ಯಾಣ-ಕ್ಷೇಮಾಭಿವೃದ್ಧಿಗಾಗಿ ಯಜ್ಞಗಳು ನಡೆಯುತ್ತಿದ್ದವು. ಮಳೆ ರೋಗ ನಿವಾರಣೆ, ಶತ್ರುಗಳಿಂದ ರಕ್ಷಣೆ, ಸಾಮಾಜಿಕ ಸಂಕಟ ನಿವಾರಣೆ ರಾಜ್ಯದ ಏಳಿಗೆ ಈ ರೀತಿಯ ಹಲವಾರು ಕಾರಣ-ಉದ್ದೇಶ ಗಳಿಗಾಗಿ ಯಜ್ಞಗಳನ್ನು ಅವಲಂಬಿಸುತ್ತಿದ್ದರು.
ಯಜ್ಞದ ಬಗ್ಗೆ ಡಾ॥ ಸ.ರಾ. ಗಾಡಗೀಳ ಅವರ ಹೇಳಿಕೆ: “ವಿಶಿಷ್ಟ ಮಂತ್ರಗಳ ಮತ್ತು ಸೂಕ್ತ ಕರ್ಮಗಳ ತಂತ್ರ ಶುದ್ಧ ಆಚರಣೆಯಿಂದ ನಿಸರ್ಗದ ಶಕ್ತಿಗಳನ್ನು ಅಂಕಿತದಲ್ಲಿಟ್ಟುಕೊಳ್ಳಬಹುದು. ಈ 'ಯಾತು' ತಂತ್ರ ವಿಧಿಯನ್ನಾಧರಿಸಿ ಯಜ್ಞ ವಿಧಿಯು ರೂಪುಗೊಂಡಿದೆ. ತಮ್ಮ ಉದ್ದಿಷ್ಟ ಸಾಧನೆಗಾಗಿ, ಪರಮೇಶ್ವರನಂಥ ದಯಾಘನನ ವ್ಯಕ್ತಿ ಸ್ವರೂಪದ ಶಕ್ತಿಯ (Personal Agent) ಅವಶ್ಯಕತೆಯು 'ಯಾತು' ವಿಧಿಯಲ್ಲಿರುವುದಿಲ್ಲ; ಅದೇ ರೀತಿ ಯಜ್ಞವಿಧಿಯಲ್ಲಿಯೂ ಇರುವುದಿಲ್ಲ. ಯಜ್ಞದ ಮಂತ್ರಗಳಲ್ಲಿ ಸ್ವಸಾಮರ್ಥ್ಯವಿರುತ್ತದೆ. ಯಾಚಕನ ಇಚ್ಛೆಗಳನ್ನು ಪೂರೈಸುವುದರಲ್ಲಿ ದೇವತೆಗಳ ಒಲವಿನ ಪ್ರಶ್ನೆ ಇರುವುದಿಲ್ಲ. ಕರ್ಮವನ್ನು ಸೂಕ್ತವಾಗಿ ಆಚರಿಸಿದರೆ ಫಲಪ್ರಾಪ್ತಿಯಾಗಲೇಬೇಕು. ಇದರಲ್ಲಿ ಮಂತ್ರಗಳ ಉಚ್ಚಾರಣೆಗೆ ಮತ್ತು ವಿಧಿಯುಕ್ತ ಕರ್ಮಾಚರಣೆಗೆ ಬಹಳಷ್ಟು ಮಹತ್ವವಿದೆ. ಅದರಲ್ಲಿ ಎಳ್ಳಿನಷ್ಟೂ ದೋಷವಿರಕೂಡದು. ಯಜ್ಞವಿಧಿಯಲ್ಲಿ ನಡೆಯಬಹುದಾದ ತಪ್ಪುಗಳನ್ನು ತಡೆಯಲು 'ಬ್ರಹ್ಮ' ಎಂಬ ಋತ್ವಿಜನು ಯಜ್ಞವೇದಿಕೆಯ ದಕ್ಷಿಣ ದಿಕ್ಕಿಗೆ ಕುಳಿತಿರುತ್ತಾನೆ. ಯಜ್ಞಕರ್ಮಗಳು ವಿಧಿಯುಕ್ತವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಈ ಋತ್ವಿಜನ ಕಾರ್ಯ. ಯಜ್ಞಕರ್ಮದಲ್ಲಿ ದೋಷಗಳಾದರೆ ಫಲಪ್ರಾಪ್ತಿಯಾಗುವ ಬದಲು ಯಜ್ಞಕರ್ತನಿಗೆ ಮೃತ್ಯುವಿನ ಭಯವಿರುತ್ತದೆ. ಈ ಮೃತ್ಯುವಿನಿಂದ ರಕ್ಷಿಸಲು 'ಬ್ರಹ್ಮ' ಋತ್ವಿಜನು ದಕ್ಷಿಣದಿಶೆಯಲ್ಲಿ ಕುಳಿತಿರುತ್ತಾನೆ. ದೇವತೆಗಳ ಕಾರ್ಯ ಇದರಲ್ಲಿ ನಾಮ ಮಾತ್ರ.