ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೩೭


ಕಾರಣ ಜಗತ್ತಿನ ಎಲ್ಲ ಪ್ರಾಣಿಮಾತ್ರರ ಉಸಿರಾಟವು ಕಠಿಣವಾಗಿ ಬದುಕಿರುವದೇ
ಕಷ್ಟಸಾಧ್ಯವಾಯಿತು. ಆಗ ಗಂಧರ್ವ, ದೇವ, ಅಸುರ ಹಾಗೂ ಮಾನವರು
ಬ್ರಹ್ಮದೇವನತ್ತ ಧಾವಿಸಿದರು; ತಮ್ಮ ದುರವಸ್ಥೆಯನ್ನು ಆತನ ಮುಂದೆ
ತೋಡಿಕೊಂಡು ಸಂಕಟ ನಿವಾರಣೆಯನ್ನು ಮಾಡಬೇಕೆಂದು ಪ್ರಾರ್ಥಿಸಿದರು.
ಬ್ರಹ್ಮದೇವನು ಎಲ್ಲವನ್ನೂ ತಿಳಿದುಕೊಂಡು ಅವರೊಡನೆ ವಾಯುವಿದ್ದಲ್ಲಿಗೆ
ತೆರಳಿದನು. ಪ್ರಜ್ಞೆತಪ್ಪಿದ ಪುತ್ರನನ್ನು ತೊಡೆಯಮೇಲೆ ಇರಿಸಿಕೊಂಡು ಕುಳಿತ
ವಾಯುವನ್ನು ಕಂಡು ಎಲ್ಲರಿಗೂ ಕನಿಕರವುಂಟಾಯಿತು. ಬ್ರಹ್ಮದೇವನ ದರ್ಶನ
ವಾದೊಡನೆ ವಾಯುವು ಸಾಷ್ಟಾಂಗ ನಮಸ್ಕಾರ ಹಾಕಿದನು. ಬ್ರಹ್ಮದೇವನು
ಹನುಮಾನನ ಮೈಮೇಲೆ ಕೈ ಆಡಿಸಿದ ತಕ್ಷಣ ಆತನು ಚೇತರಿಸಿಕೊಂಡನು.
ಆಗ ವಾಯುವು ತನ್ನ ಸಂಚಾರವನ್ನು ಪುನಃ ಪ್ರಾರಂಭಿಸಿದನು. ಎಲ್ಲ ಪ್ರಜೆಗಳಿಗೂ
ಆನಂದವಾಯಿತು.
ವಾಯುವಿನ ಹಿತವನ್ನು ಕೋರುವ ಬ್ರಹ್ಮದೇವನು ದೇವತೆಗಳಿಗೆ ಈ
ರೀತಿ ನುಡಿದನು: “ಹೇ ಇಂದ್ರ, ಅಗ್ನಿ, ವರುಣ ದೇವತೆಗಳಿರಾ, ಹೇ ಶಿವಾ,
ಕುಬೇರ, ಪ್ರಭೃತಿ ದೇವತೆಗಳಿರಾ, ನೀವು ಎಲ್ಲವನ್ನೂ ಅರಿತಿರುವಿರಿ. ಆದರೂ
ನಾನು ನಿಮಗೆ ಒಂದು ಹಿತದ ಮಾತನ್ನು ಹೇಳಬಯಸುತ್ತೇನೆ. ಈ ಬಾಲಕನಿಂದ
ನಿಮ್ಮ ಒಂದು ಕಾರ್ಯವನ್ನು ಮಾಡಿಸಿಕೊಳ್ಳುವದಿದೆ. ಆದ್ದರಿಂದ ಈ
ವಾಯುವಿಗೆ ಸಂತೋಷವೆನಿಸುವಂತೆ ನೀವು ಹನುಮಾನನಿಗೆ ವರಗಳನ್ನು
ಕರುಣಿಸಿರಿ!”
ತತಃ ಸಹಸ್ರನಯನಃ ಪ್ರೀತಿಯುಕ್ತಃ ಶುಭಾನನಃ |
ಕುಶೇಶಯಮಯೀಂ ಮಾಲಾಮುತ್ಕ್ಷೇಪ್ಯೇದಂ ವಚೋsಬ್ರವೀತ್ ‖೧೦‖
ಮತ್ಕರೋತ್ಸೃಷ್ಟವಜ್ರೇಣ ಹನುರಸ್ಯ ಯಥಾ ಹತಃ |
ನಾಮ್ನಾ ವೈ ಕಪಿಶಾರ್ದೂಲೋ ಭವಿತಾ ಹನುಮಾನಿತಿ ‖೧೧‖
ಅಹಮಸ್ಯ ಪ್ರದಾಸ್ಯಾಮಿ ಪರಮಂ ವರಮದ್ಭುತಮ್ |
ಇತ‍ಃಪ್ರಭೃತಿ ವಜ್ರಸ್ಯ ಮಮಾವಧ್ಯೋ ಭವಿಷ್ಯತಿ ‖೧೨‖

ಇದನ್ನು ಕೇಳಿ ಸಂತೋಷಗೊಂಡ, ಶುಭಕರನಾದ, ಸಹಸ್ರನೇತ್ರ ಇಂದ್ರನು
ತನ್ನ ಸುವರ್ಣಕಮಲದ ಮಾಲೆಯನ್ನು ತೆಗೆದು ಹನುಮಾನನಿಗೆ ತೊಡಿಸಿ ಈ
ರೀತಿ ನುಡಿದನು: “ನನ್ನ ವಜ್ರಾಯುಧದಿಂದ ಈತನ ಗದ್ದವು ಭಗ್ನವಾಗಿದೆ.
ಇಂದಿನಿಂದ ಈ ಕಪಿಶ್ರೇಷ್ಠನು ಹನುಮಾನನೆಂಬ ಹೆಸರಿನಿಂದ ಖ್ಯಾತಿಗೊಳ್ಳುವನು.