ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಲೋಕಾಪವಾದವನ್ನು ಕೇಳಿಕೊಂಡು ಸೀತೆಯ ತ್ಯಗವನ್ನು ಮಾಡುವದೆಂದು
ರಾಮನು ನಿಶ್ಚಯಿಸಿದನು. ತನ್ನ ನಿರ್ಧಾರವನ್ನು ಸಹೋದರರಿಗೆ ಸ್ಪಷ್ಟಪಡಿಸಿದನು.
ಸೀತೆಯನ್ನು ವನದಲ್ಲಿ ಬಿಟ್ಟು ಬರುವ ದುಸ್ತರ ಕಾರ್ಯವನ್ನು ಲಕ್ಷ್ಮಣನಿಗೆ
ಒಪ್ಪಿಸಿದನು. ರಾಜಾಜ್ಞೆ ಎಂದು ಬಗೆದು ಲಕ್ಷ್ಮಣನು ಅದನ್ನು ಅತಿಕಷ್ಟದಿಮದ
ಸ್ವೀಕರಿಸಿದನು. ಸುಮಂತ್ರನು ರಥವನ್ನು ಸಿದ್ಧಗೊಳಿಸಿದಾಗ ಲಕ್ಷ್ಮಣನು
ಅರಮನೆಯಲ್ಲಿದ್ದ ಸೀತೆಯನ್ನು ಸಮೀಪಿಸಿ ಹೀಗೆಂದನು-
ತ್ವಯಾ ಕಿಲೈಷ ನೃಪತಿರ್ವರಂ ವೈ ಯಾಚಿತಃ ಪ್ರಭುಃ |
ನೃಪೇಣ ಚ ಪ್ರತಿಜ್ಞಾತಮಾಜ್ಞಪ್ತಶ್ಚಾಶ್ರಮಂ ಪ್ರತಿ ‖೭‖
ಗಂಗಾತೀರೇ ಮಯಾ ದೇವಿ ಋಷೀಣಾಮಾಶ್ರಮಾಂಶುಭಾನ್ |
ಶೀಘ್ರಂ ಗತ್ವಾ ತು ವೈದೇಹಿ ಶಾಸನಾತ್ಪಾರ್ಥಿವಸ್ಯ ನಃ ‖೮‖

“ಋಷಿಗಳ ಆಶ್ರಮದತ್ತ ಹೋಗಬೇಕೆಂದು ನೀನು ರಾಜನ ಬಳಿ ವರವನ್ನು
ಬೇಡಿಕೊಂಡಿರುವೆ; ಅದನ್ನು ಒಪ್ಪಿಕೊಂಡು ರಾಜನು ನನಗೆ ಅಪ್ಪಣೆ ಮಾಡಿದ್ದಾನೆ.
ಹೇ ವೈದೇಹಿ, ರಾಜನ ಆಜ್ಞೆಯ ಮೇರೆಗೆ ಗಂಗಾತೀರದ ಅರಣ್ಯಗಳಲ್ಲಿಯ
ಋಷಿಗಳಿರುವ ಶುಭ ಆಶ್ರಮಗಳಿಗೆ ನಿನ್ನನ್ನು ತಲುಪಿಸುತ್ತೇನೆ.”
ರಾಮನು ಕೇಳಿದ ಕಾರಣ ಸೀತೆಯು ತನ್ನ ಬಯಕೆಯನ್ನು ಪ್ರಕಟಿಸಿದಳು.
ಆದಕಾರಣ ಇದು 'ಅಯಾಚಿತ' ವರವಾಗಿದೆ.
ಇಲ್ಲಿ ವರವೆಂಬ ಶಬ್ದವನ್ನು ಬಳಸಿದ್ದರೂ ಅದು ಸೀತೆಯ ಇಚ್ಛೆಯನ್ನು
ಗೇಲಿ ಮಾಡಿದಂತಿದೆ; ಅವಳಿಗೆ ಮೋಸ ಮಾಡಿದಂತಿದೆ. ಸೀತೆಯ ದೃಷ್ಟಿಯಿಂದ
ಇದು ವರವಾಗಿರದೆ ಶಾಪವೇ ಆಗಿ ಪರಿಣಮಿಸಿದೆ.

೭೬. ದೇವ < ನಿಮಿರಾಜ

ಉತ್ತರಕಾಂಡ/೫೭

ರಾಮನು ನಿಮಿರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ.
ಶಾಪ ಕ್ರಮಸಂಖ್ಯೆ ೫೦, ವಸಿಷ್ಠ < ನಿಮಿರಾಜ- ಪರಿಶೀಲಿಸಿ.
ನಿಮಿರಾಜನು ವಸಿಷ್ಠನ ಶಾಪದಿಂದ ಅಚೇತನಗೊಂಡನು. ಆಗ
ನಿಮಿರಾಜನು ಕೈಗೊಂಡ ಧರ್ಮದೀಕ್ಷೆಯನ್ನು ಮುಂದುವರೆಸಿ ಅಲ್ಲಿ ಸೇರಿದ
ಋಷಿಗಳು ಆ ಯಾಗವನ್ನು ನಡೆಯಿಸಿದರು. ಮತ್ತು ರಾಜನ ಕಳೇಬರವನ್ನು
ರಕ್ಷಿಸಿದರು. ಯಜ್ಞವು ಪೂರ್ತಿಗೊಂಡ ನಂತರ ಭೃಗುಮುನಿಯು ಇಂತೆಂದನು: