ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೪೭


ಶಾಪದ ಅವಧಿಯು ಮುಗಿದನಂತರ ರಾಜನಿಗೆ ಪುನಃ ರಾಜ್ಯವು ದೊರಕಿತು.
ಆತನು ಪ್ರಜೆಗಳನ್ನು ಯಥಾಯೋಗ್ಯವಾಗಿ ಪರಿಪಾಲಿಸಿದನು. ಅಲ್ಲಿದ್ದ ಯಜ್ಞ
ಸಾಮಗ್ರಿಯು ಸೌದಾಸರಾಜನದಾಗಿತ್ತು.
ಈ ವರವು ಇನ್ನಿತರ ವರಗಳಿಗಿಂತ ಬೇರೆ ರೀತಿಯದಾಗಿದೆ. ಶಾಪ
ವಿಮೋಚನೆಗಾಗಿ ವರವನ್ನು ಕೊಡಲಾಗಿದೆ. ಕಲ್ಮಾಷಪಾದನು ಮೇಲಿಂದ ಮೇಲೆ
ಪ್ರಾರ್ಥಿಸಿದ ಕಾರಣದಿಂದ ಈ ವರವು ದೊರೆತಿರುವದರಿಂದ ಇದು 'ಯಾಚಿತ'
ವರವಾಗಿದೆ.

೭೯. ದೇವತೆಗಳು < ಶತ್ರುಘ್ನ

ಉತ್ತರಕಾಂಡ/೭೦

ಶತ್ರುಘ್ನನು ಲವಣಾಸುರನನ್ನು ವಧಿಸಿದ್ದರಿಂದ ಮೂರು ಲೋಕಗಳಲ್ಲಿದ್ದ
ಭಯವು ಇಲ್ಲದಾಯಿತು. ದೇವತೆಗಳು, ಋಷಿ, ಗಂಧರ್ವ, ಪನ್ನಗ, ಅಪ್ಸರೆಯರು
ಶತ್ರುಘ್ನನಿಗೆ ಜಯ ಜಯಕಾರ ಹಾಕಿದರು. ಇಂದ್ರ, ಅಗ್ನಿ, ಮೊದಲಾದ ದೇವತೆಗಳು
ಶತ್ರುಘ್ನನಿಗೆ ಈ ರೀತಿ ಮಾತನಾಡಿದರು: “ವತ್ಸ, ನಿನಗೆ ಜಯವು ಲಭಿಸಿತು.
ಲವಣಾಸುರನ ವಧೆಯು ನಿನ್ನಿಂದ ನಡೆದ ಒಂದು ಶುಭಕರ ಘಟನೆಯಾಗಿದೆ.
ಹೇ ಸದಾಚಾರಸಂಪನ್ನ ಪುರುಷ ಶ್ರೇಷ್ಠನೇ, ನೀನು ಈಗ ವರವನ್ನು ಬೇಡು!
ನಿನಗೆ ವಿಜಯವನ್ನು ಕೋರಿ ನಾವೆಲ್ಲರೂ ಇಲ್ಲಿಗೆ ಆಗಮಿಸಿದ್ದೇವೆ. ನಮ್ಮ
ದರ್ಶನವು ವ್ಯರ್ಥವಾಗಲಾರದು!”
ದೇವತೆಗಳಾಡಿದ ಮಾತುಗಳನ್ನು ಕೇಳಿ ಶತ್ರುಘ್ನನು ಕೈಜೋಡಿಸಿ ಹೀಗೆಂದನು:
ಇಯಂ ಮಧುಪುರೀ ರಮ್ಯಾ ಮಧುರಾ ದೇವನಿರ್ಮಿತಾ |
ನಿವೇಶಂ ಪ್ರಾಪ್ನುಯಾಚ್ಛೀಗ್ರಮೇಷ ಮೇsಸ್ತು ವರಃ ಪರಃ ‖೫‖

“ಮಧುದೈತ್ಯನ ಈ ಮಧುರಾನಗರವು ದೇವನಿರ್ಮಿತ ಮನೋಹರ
ನಗರವಾಗಿದೆ. ಇದು ಕೂಡಲೇ ನನ್ನ ನಿವಾಸದ ರಾಜಧಾನಿಯಾಗಲಿ ಎಂಬ
ವರವು ಬೇಕು!” ಆಗ ದೇವತೆಗಳು “ಈ ನಗರವು ರಮಣೀಯವಾಗಿರುವದ
ರೊಂದಿಗೆ ಶೂರಸೇನೆಯ ಸ್ಥಾನವೂ ಆಗುವದು” ಎಂಬ ವರವನ್ನು ಕೊಟ್ಟರು.
ದೇವತೆಗಳು ಹೇಳಿದ್ದರಿಂದ ವರವನ್ನು ಬೇಡಲಾಗಿದೆ. ಹೀಗಿರುವ ಕಾರಣ
ಇದು 'ಅಯಾಚಿತ' ವರವಾಗಿದೆ.