ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೮೧. ಶಂಕರ, ಪಾರ್ವತಿ < ಇಲರಾಜ

ಉತ್ತರಕಾಂಡ/೮೭

ರಮನು ಇಲರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ.
ಕಮರ್ದ ಪ್ರಜಾಪತಿಯ ಪುತ್ರನಾದ 'ಇಲ' ಎಂಬಾತನು ಧಾರ್ಮಿಕ ವೃತ್ತಿ
ಯವನಿದ್ದು ಬಾಹ್ಲೀಕ ದೇಶದ ರಾಜನಾಗಿದ್ದನು. ಆತನು ತುಂಬಾ ಶೂರನಾಗಿದ್ದು,
ಇಡೀ ಪೃಥ್ವಿಯನ್ನೇ ಪಾದಾಕ್ರಾಂತ ಮಾಡಿದ್ದನು. ಆತನು ತನ್ನ ರಾಜ್ಯವನ್ನು
ಸ್ವಂತ ಮಗನಷ್ಟು ಪ್ರೀತಿಯಿಂದ ಕಾಪಾಡುತ್ತಿದ್ದನು. ಒಮ್ಮೆ ಆತನು ರಥ, ತುರಗ,
ಸೈನ್ಯ, ಸೇವಕರೊಂದಿಗೆ ಬೇಟೆಗೆಂದು ಕಾಡಿಗೆ ಹೋದನು. ಹತ್ತು ಸಾವಿರ
ಮೃಗಗಳ ಬೇಟೆ ಮಾಡಿದರೂ ಆತನಿಗೆ ತೃಪ್ತಿಯಾಗಲಿಲ್ಲ. ಕಾರ್ತಿಕೇಯನ ಜನ್ಮ
ಸ್ಥಳದತ್ತ ಈ ರಾಜನು ನಡೆದಾಗ, ಅಲ್ಲಿ ಶಂಕರನು ಪಾರ್ವತಿಯೊಡನೆ ಸರಸ
ಸಲ್ಲಾಪಗಳಲ್ಲಿ ತೊಡಗಿದ್ದನ್ನು ಕಂಡನು. ಆ ಉಪವನವನ್ನು ಪ್ರವೇಶಿಸುವ ಯಾವ
ಪುಲ್ಲಿಂಗ ಪ್ರಾಣಿಯೂ ಅಲ್ಲಿ ಸೇರಿದೊಡನೆಯೇ ಸ್ತ್ರೀರೂಪದ್ದಾಗುತ್ತಿತ್ತು. ಇದು
ಆ ಉಪವನದ ವೈಶಿಷ್ಟ್ಯವಾಗಿತ್ತು. ಪಾರ್ವತಿಯೊಡನೆ ಸರಸವಾಡುತ್ತಿದ್ದ ಶಂಕರನು
ಸಹ ಸ್ತ್ರೀರೂಪವನ್ನು ಧರಿಸಿದ್ದನು. ಇಲರಾಜನು ಅಲ್ಲಿ ತಲುಪುತ್ತಲೇ ಸೈನ್ಯ
ಸೇವಕರೊಂದಿಗೆ ಈತನಿಗೆ ಸ್ತ್ರೀರೂಪವು ಬಂದಿತು. ತನಗುಂಟಾದ ಸ್ತ್ರೀರೂಪವನ್ನು
ಕಂಡು ರಾಜನಿಗೆ ಅತಿಶಯ ದುಃಖವುಂಟಾಯಿತು. ಹೀಗಾಗಲು ಶಂಕರನ ಪ್ರಭಾವ
ವಿರಬೇಕೆಂಬದನ್ನು ಅರಿತಾಗ ಭಯಗೊಂಡನು. ಸೈನ್ಯಸೇವಕರ ಸಮೇತ ಆತನು
ಶಂಕರನಿಗೆ ಶರಣಾದನು. ಆಗ ಪಾರ್ವತೀಪರಮೇಶ್ವರನು ವರವನ್ನು
ಕೊಡಬಯಸಿದನು. ಶಿವನು ನಕ್ಕು ರಾಜನಿಗೆ ಇಂತೆಂದನು:
ಪುರುಷತ್ವಮೇತೇ ಸೌಮ್ಯ ವರಂ ಮರಯ ಸುವ್ರತ ‖೨೦‖

“ಹೇ ಸೌಮ್ಯನೇ, ಸದಾಚಾರಸಂಪನ್ನನೆ, ಪುರುಷತ್ವ ಒಂದನ್ನುಳಿದು ಬೇರೆ
ನಿನಗೆ ಇಷ್ಟವಿದ್ದ ವರವನ್ನು ಕೇಳು!” ಎಂದನು. ರಾಜನಿಗೆ ಪುರುಷತ್ವವೇ ಬೇಕಿತ್ತು.
ಅದನ್ನು ಶಂಕರನು ಕೊಡಲು ಒಪ್ಪಲಿಲ್ಲವಾದ್ದರಿಂದ ಆತನಿಗೆ ದುಃಖವೆನಿಸಿ
ಶಂಕರನ ಬಳಿ ಆತನು ಯಾವ ವರವನ್ನೂ ಯಾಚಿಸಲಿಲ್ಲ. ಆನಂತರ ಆತನು
ದೇವಿಯಾದ ಪಾರ್ವತಿಗೆ ಶರಣು ಹೋದನು ಮತ್ತು ಪ್ರಾರ್ಥಿಸಿ ಹೀಗೆಂದನು:
ಈಶೇ ವರಾಣಾಂ ವರದೇ ಲೋಕನಾಮಸಿ ಭಾಮಿನೀ ‖೨೨‖
ಅಮೋಘದರ್ಶನೇ ದೇವಿ ಭಜ ಸೌಮ್ಯೇನ ಚಕ್ಷುಷಾ ‖೨೩‖