ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೬೯



೧. ಅಗಸ್ತ್ಯ


ಅಗಸ್ತ್ಯನು ವಸಿಷ್ಠನಂತೆ ಮಿತ್ರ-ವರುಣರಿಂದ ಜನಿಸಿದ ಪುತ್ರ, ಊರ್ವಶಿಯು
ವರುಣನೊಡನೆ ಸಂಭೋಗವನ್ನು ನಿರಾಕರಿಸಿದ ಕಾರಣ ಆತನು ತನ್ನ ತೇಜಸ್ಸನ್ನು
(ವೀರ್ಯವನ್ನು) ಒಂದು ಕುಂಭದಲ್ಲಿ ಹಾಕಿದನು. ಮಿತ್ರನಿಗೆ ಈ ಸಂಗತಿಯು
ತಿಳಿದುಬಂದಿತು. ಆಗ ಮಿತ್ರನು ಊರ್ವಶಿಗೆ ಶಾಪ ಕೊಟ್ಟು ತನ್ನ ತೇಜಸ್ಸನ್ನು
ಕುಂಭದಲ್ಲಿ ವಿಸರ್ಜಿಸಿದನು. ಆ ಕುಂಭದಿಂದ ತೇಜಸ್ವಿಗಳಾದ ಇಬ್ಬರು ಶ್ರೇಷ್ಠ
ಮಹರ್ಷಿಗಳು ಹೊರಬಂದರು. ಅವರಲ್ಲಿ ಮೊದಲಿನವನು ಅಗಸ್ತ್ಯ,
ಎರಡನೆಯವನು ವಸಿಷ್ಠ. ಅಗಸ್ತ್ಯನು, ಮಿತ್ರನಿಗೆ ನಾನು ನಿನ್ನೊಬ್ಬನ ಪುತ್ರನಲ್ಲವೆಂದು
ಹೇಳಿದನು. ಇವರ ಜನ್ಮದ ಬಗೆಗಿನ ಇನ್ನೊಂದು ಕಥೆಯ ಪ್ರಕಾರ ಊರ್ವಶಿಯನ್ನು
ಕಂಡಂತೆ ಮಿತ್ರ ಮತ್ತು ವರುಣರ ವೀರ್ಯವು ಕಮಲದಲ್ಲಿ ಬಿದ್ದಿತು; ಅದರಿಂದ
ಅಗಸ್ತ್ಯ-ವಸಿಷ್ಠರು ಜನ್ಮ ತಾಳಿದರು. ಲೋಪಮುದ್ರೆ ಎಂಬಾಕೆಯು ಅಗಸ್ತ್ಯನ
ಪತ್ನಿಯಾಗಿದ್ದಳು. ಅವಳು ರಾಜಕನ್ಯೆಯಾಗಿದ್ದಳು. ಅವಳ ಒಲವು ಐಶ್ವರ್ಯದತ್ತ
ಇತ್ತು. ಅಗಸ್ತ್ಯನು ವಿರಕ್ತನಾಗಿದ್ದರೂ ತನ್ನ ಹೆಂಡತಿಯನ್ನು ಸಂತೋಷಗೊಳಿಸಲು
ಆತನು 'ಇಲ್ವಲ' ಎಂಬಾತನ ಸಂಪತ್ತನ್ನು ಪಡೆದುಕೊಂಡನು. ಸಮುದ್ರದಲ್ಲಿದ್ದ
ಕಾಲಕೇಯರು ಜನರನ್ನು ಪೀಡಿಸಲು ಪ್ರಾರಂಭಿಸಿದಾಗ ಅಗಸ್ತ್ಯನು ಇಡೀ
ಸಮುದ್ರದ ನೀರನ್ನು ಪ್ರಾಶಿಸಿದನು. ನಹುಷನು ಅಗಸ್ತ್ಯನನ್ನು ಪಲ್ಲಕ್ಕಿಯನ್ನು
ಎತ್ತಿಕೊಂಡು ನಡೆಯುವ ವಾಹಕನನ್ನಾಗಿ ಮಾಡಿದನು. ಆಗ ಕೋಪಗೊಂಡ
ಅಗಸ್ತ್ಯನು ತನ್ನ ಜಡೆಯ ಒಂದು ಕೂದಲನ್ನು ಭೃಗುವಿನ ಶಾಪದಿಂದ ಅಭಿಮಂತ್ರಿಸಿ
ನಹುಷನತ್ತ ಎಸೆದಾಗ, ನಹುಷನು, ಹತ್ತು ಸಾವಿರ ವರ್ಷಗಳ ಕಾಲ ಸರ್ಪದ
ರೂಪದಲ್ಲಿ ಬಿದ್ದುಕೊಳ್ಳಬೇಕಾಯಿತು. ಅಗಸ್ತ್ಯನು, ಚಿನ್ನ ವೈಢೂರ್ಯಗಳಿಂದ
ಖಚಿತವಾದ ಧನುಸ್ಸನ್ನು, ಅಮೋಘವಾದ ಶರಗಳನ್ನು ಹಾಗೂ ಶರ ತುಂಬಿದ
ಅಕ್ಷಯ ಬತ್ತಳಿಕೆಯನ್ನು ಕೊಟ್ಟನು. ಯಜ್ಞಪಶುವೆಂದು ಮರುತನ ಸಲುವಾಗಿ
ತಂದ ಪಶುವನ್ನು ಇಂದ್ರನು ಅಪಹರಿಸಿದನು. ಆಗ ಮರುತನು ಇಂದ್ರನನ್ನು,
ಹೊಡೆಯಲು ಧಾವಿಸಿದನು. ಆಗ ಅಗಸ್ತ್ಯನು ಮರುತನನ್ನು ಶಾಂತಗೊಳಿಸಿ,
ಇಂದ್ರನೊಡನೆ ಮಿತ್ರತ್ವವನ್ನುಂಟುಮಾಡಿಕೊಟ್ಟನು. ಹತ್ತು ವರ್ಷಗಳ ಒಂದು
ಯಾಗವನ್ನಾರಂಭಿಸಿ, ಪಶುಹಿಂಸೆ ಇರದೇ ಇದ್ದರೂ ಇಂದ್ರನು ಮಳೆಗರೆಯುವಂತೆ