ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮಾಡಿದನು. ಅಗಸ್ತ್ಯನ ಸಂಬಂಧವು ದಕ್ಷಿಣಭಾಗದೊಡನೆ ಹೆಚ್ಚಾಗಿ ಇದ್ದುದರಿಂದ
ಈತನನ್ನು ದಕ್ಷಿಣದ ಸ್ವಾಮಿ ಎಂದೆನ್ನುತ್ತಾರೆ. ಈತನಿಂದ ಲೋಪಾಮುದ್ರೆಯು
ಇಧ್ಮವಾಹ (ದೃಢಸ್ಸು) ಎಂಬ ಪುತ್ರನನ್ನು ಪಡೆದಳು. ಈ ಎರಡು ಹೆಸರಿನ
ಇಬ್ಬರು ಪುತ್ರರಿರುವ ಸಂಭವವೂ ಇದೆ. ಅಗಸ್ತ್ಯ ಹೆಸರಿನ ಒಂದು ಚುಕ್ಕೆಯು
ಭಾದ್ರಪದ ಮಾಸದಲ್ಲಿ ದಕ್ಷಿಣ ದಿಕ್ಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ನೀರು
ದೋಷರಹಿತವಾಗುತ್ತದೆ ಎಂಬ ತಿಳುವಳಿಕೆ ಇದೆ. ಅದಕ್ಕೆ ಅಗಸ್ತ್ಯನ ಸಂಬಂಧವಿದೆ
ಎನ್ನುತ್ತಾರೆ.
ಅಗಸ್ತ್ಯ ಋಷಿಯ ಹೆಸರಿನಲ್ಲಿ ಸಾಕಷ್ಟು ಗ್ರಂಥರಚನೆಯಿದೆ. ಅಗಸ್ತ್ಯ
ಹೆಸರಿನ ಗೋತ್ರವೂ ಕೂಡ ಇದೆ.

೨. ಅಂಗದ

ಈತನು ವಾಲಿ ಮತ್ತು ತಾರೆಯರ ಪುತ್ರ; ವಾಲಿಯ ಬಲುಪ್ರೀತಿಯ
ಮಗ; ಅತ್ಯಂತ ಪರಾಕ್ರಮಿ ಕೂಡ. ಮರಣೋನ್ಮುಖನಾದಾಗ ವಾಲಿಯು
ಅಂಗದನನ್ನು ಸುಗ್ರೀವನಿಗೆ ಒಪ್ಪಿಸಿ, ಅವನನ್ನು ತನ್ನ ಸ್ವಂತ ಮಗನೆಂದೇ ತಿಳಿಯಲು
ಹೇಳಿದನು. ಸುಗ್ರೀವನನ್ನು ಅನುಸರಿಸಿ ವರ್ತಿಸಬೇಕೆಂದು ಅಂಗದನಿಗೆ ಹೇಳಿದನು.
ಇಷ್ಟಾದರೂ ಸುಗ್ರೀವನ ಬಗ್ಗೆ ಅಂಗದನ ಮನಸ್ಸಿನಲ್ಲಿ ಸಂದೇಹ ಉಳಿದಿತ್ತು.
ರಾಮನಿಗೆ ನೆರವಾಗಬೇಕೆಂದು ಬೃಹಸ್ಪತಿಯು ಅಂಶರೂಪವಾಗಿ ಅಂಗದನೆಂದು
ಜನ್ಮ ತಾಳಿದ್ದರಿಂದ ಅಂಗದನು ಬಹು ಬುದ್ದಿವಂತನಾಗಿದ್ದನು. ವಾಲಿಯ ವಧೆಯ
ನಂತರ ರಾಮನು ಸುಗ್ರೀವನಿಗೆ ಕಿಷ್ಕಿಂಧೆಯ ಪಟ್ಟ ಕಟ್ಟಿದನು. ಅದೇ ಸಮಯಕ್ಕೆ
ಸುಗ್ರೀವನಿಂದ ಅಂಗದನಿಗೆ ಯೌವರಾಜ್ಯಾಭಿಷೇಕವನ್ನು ಮಾಡಿಸಿದನು. ಸೀತೆಯ
ಶೋಧಾರ್ಥಕ್ಕಾಗಿ ದಕ್ಷಿಣದಿಕ್ಕಿನತ್ತ ಹೋದ ವಾನರರ ತಂಡದ ನಾಯಕ ಅಂಗದ
ನಾಗಿದ್ದನು. ಅವನು ಒಬ್ಬ ಅಸುರನಿಗೆ ರಕ್ತವನ್ನು ಕಾರುವಂತೆ ಮಾಡಿದನು.
ನಿರ್ದಿಷ್ಟ ಸಮಯದೊಳಗೆ ಸೀತೆಯ ಸುಳಿವು ಸಿಗದಿದ್ದರಿಂದ, ಈ ಅಂಗದನ
ಗುಂಪಿನವರಿಗೆ ಸುಗ್ರೀವನ ಭಯವೆನಿಸಿ, ಆತನತ್ತ ಮರಳಿ ಹೋಗದೆ
ವಾನರರೆಲ್ಲರೂ ಪ್ರಾಯೋಪವೇಶ ಮಾಡಿ ಮರಣವನ್ನಪ್ಪುವುದೆಂದು ನಿಶ್ಚಯಿಸಿದರು.
ಆಗ ಸಂಪಾತಿಯಿಂದ ಸೀತೆಯಿದ್ದ ಸ್ಥಾನವು ತಿಳಿದುಬಂದ ನಂತರ ಸಮುದ್ರವನ್ನು
ದಾಟುವದೆಂತು? ಯಾರು ದಾಟಬಲ್ಲರು?- ಎಂಬ ಚಿಂತೆಯು ಹುಟ್ಟಿಕೊಂಡಿತು.
ಆಗ ಒಂದೇ ನೆಗೆತದಲ್ಲಿ ನೂರು ಯೋಜನಗಳನ್ನು ದಾಟುವ ಮನೋಬಲವನ್ನು
ಅಂಗದ ವ್ಯಕ್ತಪಡಿಸಿದನು. ರಾವಣನೊಡನೆ ಯುದ್ಧವನ್ನು ತಡೆಯಲು,