ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೭೧


ಸಾಮೋಪಚಾರದ ಮಾತುಕತೆಗಾಗಿ, ರಾಮನ ರಾಜದೂತನೆಂದು ಅಂಗದನನ್ನು
ನಿಶ್ಚಯಿಸಲಾಯಿತು. ಅಂಗದನು ಇಂದ್ರಜಿತುವಿನೊಡನೆ ಯುದ್ಧಮಾಡಿ ಆತನನ್ನು
ಸದೆಬಡಿದನು; ನರಾಂತಕ, ಮಹಾಪಾರ್ಶ್ವ, ವಜ್ರದಂಷ್ಟ್ರರಂಥ ಬಲಶಾಲಿ ರಾಕ್ಷಸರನ್ನು
ಯಮಸದನಕ್ಕೆ ಅಟ್ಟಿದನು. ಕುಂಭಕರ್ಣನ ವಿಶಾಲವಾದ ಶರೀರವನ್ನು ಕಂಡು
ಭಯಗೊಂಡು ತತ್ತರಿಸಿದ ವಾನರಭಟರನ್ನು ಅಂಗದನು ಹುರಿದುಂಬಿಸಿದನು.
ಅಂಗದನ ಸಾಟಿಯಿಲ್ಲದ ಈ ಪರಾಕ್ರಮವನ್ನು ಅವಲೋಕಿಸಿ ರಾಮನು
ಸಂತೋಷಗೊಂಡನು. ರಾಜ್ಯಾಭಿಷೇಕದ ಸಮಯದಲ್ಲಿ ರಾಮನು ತನ್ನ
ಬಾಹುಭೂಷಣಗಳನ್ನು ಅಂಗದನಿಗೆ ಕೊಟ್ಟು ಗೌರವಿಸಿದನು. ಅಂಗದನನ್ನು
ತನ್ನ ಬಳಿ ಕುಳ್ಳಿರಿಸಿಕೊಂಡು ರಾಮನು ಸುಗ್ರೀವನಿಗೆ “ನಿನ್ನ ಮಗನಾದ ಈ
ಅಂಗದನು ಸತ್ಪುತ್ರನಾಗಿದ್ದಾನೆ. ಸಲಹೆ, ವಿಚಾರವಿನಿಮಯಚತುರನಿದ್ದು, ನನ್ನ
ಹಿತಾಸಕ್ತಿಯಲ್ಲಿ ತುಂಬಾ ದಕ್ಷನಿದ್ದಾನೆ” ಎಂದು ನುಡಿದನು. ಸುಗ್ರೀವನು ಅಂಗದನಿಗೆ
ರಾಜ್ಯಾಭಿಷೇಕವನ್ನು ನಡೆಯಿಸಿ ಕಿಷ್ಕಿಂಧೆಯ ರಾಜ್ಯವನ್ನು ಆತನಿಗೆ ಕೊಟ್ಟನು.

೩. ಅಂಜನಾ

ಇವಳಿಗೆ 'ಅಂಜನಿ' ಎಂದುಕೊಂಡ ಅನ್ನುತ್ತಾರೆ. ಪುಂಜಿತಸ್ಥಲೆ ಎಂಬ
ಅಪ್ಸರೆಯು ಋಷಿಗಳ ಶಾಪದಿಂದ ಕುಂಜರನೆಂಬ ವಾನರನ ಕನ್ಯೆಯಾದಳು.
ಶಿವಶತರುದ್ರಸಂಹಿತೆಯಲ್ಲಿ ಈ ಕನ್ಯೆಯು ಗೌತಮ ಋಷಿಯ ಮಗಳೆಂದು
ಉಲ್ಲೇಖವಿದೆ. ಇವಳು ಕೇಸರಿ ಎಂಬ ವಾನರನ ಪತ್ನಿಯಾಗಿದ್ದಳು. ವಾಯುವಿನ
ಪ್ರಸಾದದಿಂದ ಇವಳಿಗೆ ಹನುಮಾನನೆಂಬ ಪುತ್ರನಾದನು- ಎಂದು
ಸ್ಕಂದಪುರಾಣದಲ್ಲಿ ಉಲ್ಲೇಖವಿದೆ. ಮತಂಗಋಷಿಯು ಹೇಳಿದರಿಂದ ಇವಳು
ಪತಿಯೊಡನೆ ವೆಂಕಟಾಚಲಪರ್ವತದ ಮೇಲೆ ಹೋಗಿ ಅಲ್ಲಿಯ ಪುಷ್ಕರಣಿಯಲ್ಲಿ
ಸ್ನಾನ ಮಾಡಿದಳು. ಅಲ್ಲಿಯ ವರಾಹ ಮತ್ತು ವೆಂಕಟೇಶರನ್ನು ವಂದಿಸಿದಳು.
ಆಕಾಶಗಂಗೆ ಎಂಬ ತೀರ್ಥದಲ್ಲಿ ವಾಯುವನು ಆರಾಧಿಸಿದಳು. ಒಂದು ಸಾವಿರ
ವರ್ಷಗಳ ತಪಸ್ಸು ಪೂರ್ಣವಾದ ನಂತರ ವಾಯುವು ಪ್ರಸನ್ನನಾಗಿ ವರವನ್ನು
ಬೇಡಲು ಹೇಳಿದನು. ಆಗ ಅಂಜನಿಯು ಪುತ್ರನನ್ನು ಬೇಡಿಕೊಂಡಳು. ಅವನೇ
ಹನುಮಾನನಾದನು. ಇವಳು 'ಕಾಮರೂಪಧರೆ'ಯಾಗಿದ್ದಳು. ಈ ಅಂಜನಿಗೆ
'ಮಾರ್ಜರಾ' ಹೆಸರಿನ ಸವತಿಯೊಬ್ಬಳಿದ್ದಳು.