ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೪. ಅತಿಕಾಯ

ಅತಿಕಾಯನು ರಾವಣ ಹಾಗೂ ಧಾನ್ಯಮಾಲಿನಿ ಇವರ ಮಗನು. ಅವನು
ಹೆಸರಿನಂತೆ ಬಹುದೊಡ್ಡ ದೇಹದವನಿದ್ದನು. ಬ್ರಹ್ಮದೇವನನ್ನು ಪ್ರಸನ್ನಗೊಳಿಸಿ,
ಅಸ್ತ್ರ, ಕವಚ, ದಿವ್ಯರಥಗಳನ್ನು ಪಡೆದುದಲ್ಲದೆ ಸುರಾಸುರರಿಂದ ತನ್ನ ವಧೆಯಾಗ
ಕೂಡದೆಂಬ ವರವನ್ನು ಸಹ ಇವನು ಹೊಂದಿದ್ದನು. ಈತನು ಇಂದ್ರ ಮತ್ತು
ವರುಣರನ್ನು ಸೋಲಿಸಿದ್ದನು. ಕುಂಭಕರ್ಣನ ವಧೆಯಾದ ನಂತರ ಈತನು
ರಣಾಂಗಣಕ್ಕೆ ಇಳಿದನು. ಅವನ ಆರ್ಭಟದಿಂದ ತತ್ತರಿಸಿದ ವಾನರರು ರಾಮನ
ಆಶ್ರಯಕ್ಕೆ ಧಾವಿಸಿದರು. ಅತಿಕಾಯನು ಭೀಮಪರಾಕ್ರಮಿಯಾಗಿದ್ದನು. ಆತನು
ತುಲನೆ ಇಲ್ಲದ ಬಲವುಳ್ಳ, ಅಸ್ತ್ರಜ್ಞಾನಿಯಾದ, ಗಜಾರೋಹಣ-ಅಶ್ವಾರೋಹಣ
ಗಳಲ್ಲಿ ಖ್ಯಾತನಾದ, ಖಡ್ಗ, ಧನುಸ್ಸು, ಬಾಣ ಮುಂತಾದ ಶಸ್ತ್ರಾಸ್ತ್ರಗಳಲ್ಲಿ ನಿಪುಣನಾದ,
ಸಾಮದಾಮಾದಿ ರಾಜನೀತಿಯಲ್ಲಿ ಮರ್ಮಜ್ಞನಾದ ವೀರನಾಗಿದ್ದನೆಂದು ರಾಮನಿಗೆ
ಅತಿಕಾಯನ ಪರಿಚಯವನ್ನು ವಿಭೀಷಣನು ಮಾಡಿಕೊಟ್ಟನು. 'ಯಾವ ಸಾಮಾನ್ಯ
ವೀರನೊಡನೆಯೂ ನಾನು ಯುದ್ಧವನ್ನು ಇಚ್ಛಿಸುವದಿಲ್ಲ; ಯಾರ ಬಳಿ
ಸಾಮರ್ಥ್ಯವಿದೆಯೋ ಅವನು ನನ್ನೊಡನೆ ಯುದ್ಧಕ್ಕೆ ನಿಲ್ಲಬೇಕು' ಎಂದು
ಅತಿಕಾಯನು ರಾಮನಿಗೆ ನುಡಿದಿದ್ದನು. ಅತಿಕಾಯ-ಲಕ್ಷ್ಮಣ ಇವರಲ್ಲಿಯ
ಯುದ್ಧದಲ್ಲಿ, ಅತಿಕಾಯನು ಲಕ್ಷ್ಮಣನಿಂದ ಕೊಲ್ಲಲ್ಪಟ್ಟನು.

೫. ಅದಿತಿ

ಅದಿತಿಯು ಪ್ರಾಚೇತಸ ದಕ್ಷ ಹಾಗೂ ಅಸಿಕ್ನಿ ಇವರ ಪುತ್ರಿ. ಇವಳು
ಕಶ್ಯಪನ ಪತ್ನಿಯಾಗಿದ್ದು ಮಿತ್ರ-ವರುಣರ ತಾಯಿಯಾಗಿದ್ದಳು. ಇವಳಿಗೆ
ಬಲಶಾಲಿಗಳಾದ ಎಂಟು ಮಕ್ಕಳು ಜನಿಸಿದರು. ವೇದಗಳಲ್ಲಿ ಇವಳನ್ನು ವಿಷ್ಣುಪತ್ನಿ
ಎಂದು ಉಲ್ಲೇಕಿಸಲಾಗಿದೆ. ದ್ಯೌ ಹಾಗೂ ಪೃಥ್ವಿಯಂತೆಯೇ ಇವಳನ್ನು ಬಗೆಯ
ಲಾಗುತ್ತದೆ. ಮೈನಾಕ ಪರ್ವತದ ಶಿಖರದ ಮೇಲೆ ಇವಳು 'ಚರು'ವನ್ನು
ಬೇಯಿಸಿದ್ದಳು. ಒಂಟಿಗಾಲಿನಲ್ಲಿ ನಿಂತು ಅವಳು ತಪಸ್ಸನ್ನಾಚರಿಸಿದ್ದರಿಂದ ಇವಳ
ಉದರದಿಂದ ವಿಷ್ಣುವು ಜನ್ಮತಾಳಿದನು. ಅದಿತಿಗೆ ಹನ್ನೆರಡು ಪುತ್ರರಿದ್ದರೆಂಬ
ಒಂದು ಉಲ್ಲೇಖವಿದೆ. ತೈತ್ತರೀಯ ಸಂಹಿತೆಯಲ್ಲಿ ಇವಳಿಗೆ ಎಂಟೇ ಪುತ್ರರಿದ್ದ
ರೆಂದು ಹೇಳಲಾಗಿದೆ. ಏಳು ಪುತ್ರರನ್ನು ಮಾತ್ರ ಇವಳು ಬಯಸಿದ್ದಳು; ಆದ್ದರಿಂದ
ಎಂಟನೆಯ ಗರ್ಭವನ್ನು ಇವಳು ಒಡೆದಳು; ಅದರಿಂದ 'ಮಾರ್ತಾಂಡ' ಅಥವಾ
'ವಿವಸ್ವಾನ'ನು ಜನ್ಮತಾಳಿದನು; ನರಕಾಸುರನು ಇವಳ ಕರ್ಣಕುಂಡಲಗಳನ್ನು