ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

೯. ಅರಜಾ
ಅರಜಾ ಉಶನಸ ಶುಕ್ರನ ಪುತ್ರಿ. ಇವಳ ಲಾವಣ್ಯಕ್ಕೆ ಮನಸೋತು ಕಾಮಮೋಹಿತನಾಗಿ ದಂಡರಾಜನು ಇವಳನ್ನು ಬಲಾತ್ಕರಿಸಿ ಸಂಭೋಗಿಸಿದನು. ಈ ಸಂಗತಿಯು ಭಾರ್ಗವನಿಗೆ ತಿಳಿದಾಗ ಆತನು ದಂಡರಾಜ ಮತ್ತು ದಂಡಕಾರಣ್ಯ ಇವರಿಗೆ ಶಾಪವನ್ನು ಕೊಟ್ಟು ತನ್ನ ಕನ್ಯೆಯನ್ನು ಕುರಿತು, 'ನೀನು ಜಾಗರೂಕಳಾಗಿ ಇದೇ ಆಶ್ರಮದಲ್ಲಿರು! ನೀನು ಭಯರಹಿತಳಾಗಿ, ಈ ಉದ್ದ-ಅಗಲ ಒಂದು ಯೋಜನವಿರುವ ವಿಶಾಲ ಸರೋವರವನ್ನು ಉಪಭೋಗಿಸಿಕೊಂಡಿರು! ನೀನು ಇಲ್ಲಿ ಸಮಯಪ್ರತೀಕ್ಷೆಯಲ್ಲಿರು! ಒಂದು ರಾತ್ರಿಯಲ್ಲಿ ಈ ಪ್ರದೇಶದಲ್ಲಿ ಧೂಲಿವೃಷ್ಟಿಯಾಗುವುದಿದೆ. ಆ ರಾತ್ರಿಯಲ್ಲಿ ನಿನ್ನ ನಿಕಟದಲ್ಲಿರುವವರ ವಧೆಯು ಆ ಧೂಲಿವೃಷ್ಟಿಯಿಂದ ಆಗಲಾರದು!' ಎಂದು ತಿಳಿಸಿ ಅವಳನ್ನು ಅಲ್ಲಿಯೇ ಬಿಟ್ಟು ಬೇರೆಡೆಗೆ ಹೋದನು. ಶುಕ್ರಭಾರ್ಗವನ ಈ ಆಜ್ಞೆಯನ್ನು ಕೇಳಿ ಅರಜಾ ಬಲು ದುಃಖಿತಳಾದಳು.

೧೦. ಅಲರ್ಕ
ಅಲರ್ಕನು ಕಾಶಿಯ ದಿವೋದಾಸ ರಾಜನ ಮರಿಮಗನಾಗಿದ್ದನು. ಈತನು ಕಾಶಿಯಲ್ಲಿ ಅರವತ್ತಾರು ಸಾವಿರ ವರ್ಷಗಳ ಕಾಲ ರಾಜ್ಯವನ್ನಾಳಿದನು. ಲೋಪಾಮುದ್ರೆಯ ಕೃಪೆಯಿಂದ ಈತನಿಗೆ ದೀರ್ಘಾಯುಸ್ಸು ದೊರಕಿತ್ತು. ಇವನು ಚಿರತರುಣನಾಗಿದ್ದನು. ನಿಕುಂಭನ ಶಾಪದಿಂದ ವಾರಣಾಸಿಯು ಜನರಹಿತವಾಗಿತ್ತು. ಅಲರ್ಕನು ಕ್ಷೇಮಕನನ್ನು ಕೊಂದು ಪುನಃ ಇದನ್ನು ಸ್ಥಾಪಿಸಿದನು; ಧನುರ್ವಿದ್ಯೆಯ ಬಲದಿಂದ ಸಮಗ್ರ ಭೂಲೋಕವನ್ನು ಗೆದ್ದುಕೊಂಡನು. ಅನಂತರ ಅಲರ್ಕನ ಮನಸ್ಸು ಸೂಕ್ಷ್ಮಬ್ರಹ್ಮದತ್ತ ಒಲಿಯಿತು. ಈತನಿಗೆ 'ಸಂತತಿ' ಎಂಬ ಒಬ್ಬ ಪುತ್ರನಿದ್ದನು. ತಾಯಿಯ ಇಚ್ಛೆಯನುಸಾರ ಈತನು ರಾಜ್ಯವನ್ನು ತ್ಯಜಿಸಿದ ಇತ್ಯಾದಿ ಮಾಹಿತಿಗಳು ಬೇರೆ ಬೇರೆ ಗ್ರಂಥಗಳಿಂದ ತಿಳಿದು ಬರುತ್ತವೆ.

೧೧. ಅಸಮಂಜ
ಅಸಮಂಜನು ಸಗರ-ಕೇಶಿನಿ ದಂಪತಿಗಳ ಪುತ್ರ. ಈತನು ತನ್ನ ಮಲತಾಯಿಯ ಮಕ್ಕಳನ್ನು ನದಿಯ ನೀರಿನಲ್ಲಿ ತಳ್ಳುತ್ತಿದ್ದನು; ಮತ್ತು ಅವರು ಮುಳುಗಹತ್ತಿದಾಗ ನಗುತ್ತಿದ್ದನು. ಈತನು ಪೂರ್ವಜನ್ಮದಲ್ಲಿ ಯೋಗಿಯಾಗಿದ್ದು, ಆಗಿನ ದುಷ್ಟಜನರ ಸಂಪರ್ಕದಿಂದ ಯೋಗಭ್ರಷ್ಟನಾಗಿದ್ದನು. ರಾಜನು ಈತನನ್ನು