ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೭೭

ಹೊರಗೆ ಅಟ್ಟಿದಾಗ ಇವನು ಕಾಡಿಗೆ ಹೋದನು. ಹೀಗೆ ವನಕ್ಕೆ ಹೋಗುವಾಗ ಈತನು, ತಾನು ನೀರಿನಲ್ಲಿ ಮುಳುಗಿಸಿದ ಎಲ್ಲರನ್ನೂ ಯೋಗಬಲದಿಂದ ಜೀವಿತಗೊಳಿಸಿದನು. ಈತನು ಶಿವಭಕ್ತನಾಗಿದ್ದನು. ಈತನಿಗೆ 'ಅಂಶುಮಾನ' ಎಂಬ ಮಗನಿದ್ದನು.

೧೨. ಅಹಲ್ಯೆ

ಇವಳು ಬ್ರಹ್ಮದೇವನ ಮಾನಸಪುತ್ರಿಯಾಗಿದ್ದಳು. ಈಕೆಯ ತಂದೆಯ ಹೆಸರು ಭಾಗವತದಲ್ಲಿ 'ಮುದಗಲ' ಎಂತಿದ್ದರೆ ಹರಿವಂಶದಲ್ಲಿ 'ವಘ್ರ್ಯಶ್ವ' ಎಂದಿದೆ. ಇವಳಲ್ಲಿ ರೂಪಹೀನತೆಯ (ಹಲ್ಯ) ಲವಲೇಶವೂ ಇರಲಿಲ್ಲವಾದ್ದರಿಂದ ಬ್ರಹ್ಮದೇವನು ಇವಳನ್ನು 'ಅಹಲ್ಯೆ' ಎಂದು ಕರೆದನು. ಇವಳು ಅತಿರೂಪವತಿ ಯಾಗಿದ್ದಳು. ಚಿಕ್ಕವಳಿದ್ದಾಗ ಬ್ರಹ್ಮದೇವನು ಈಕೆಯನ್ನು ಗೌತಮನ ಬಳಿ ಮುಡುಪಾಗಿ ಇಟ್ಟಿದ್ದನು. ಪ್ರಾಯಕ್ಕೆ ಬಂದನಂತರ ಇವಳನ್ನು ಗೌತಮನು ಬ್ರಹ್ಮ ದೇವನತ್ತ ಮರಳಿ ಕಳುಹಿಸಿದನು. ಗೌತಮನ ಜಿತೇಂದ್ರಿಯತ್ವವನ್ನೂ ಮತ್ತು ಆತನಲ್ಲಿದ್ದ ಸಿದ್ಧಿಯನ್ನೂ ಕಂಡ ಬ್ರಹ್ಮದೇವನಿಗೆ, ಗೌತಮನು ಅಹಲ್ಯೆಯನ್ನು ಭಾರ್ಯೆಯಾಗಿ ಸ್ವೀಕರಿಸಬೇಕು ಎಂದೆನಿಸಿತು. ಪೃಥ್ವಿಯ ಪ್ರದಕ್ಷಿಣೆಯನ್ನು ಪೂರೈಸಿ ಮೊದಲು ಬರುವವನ ಜೊತೆ ಇವಳ ವಿವಾಹವನ್ನು ಮಾಡುವದೆಂದು ನಿರ್ಣಯಿಸಿದನು. ದೇವ, ದಾನವ, ರಾಕ್ಷಸರಿಗೂ ಸಹ ಈ ರೂಪ ಲಾವಣ್ಯ ಸಂಪನ್ನೆಯಾದ ಅಹಲ್ಯೆಯು ಬೇಕಿದ್ದಳು. ಮಿಕ್ಕ ದೇವತೆಗಳೊಡನೆ ಇಂದ್ರನು ಕೂಡ ಪೃಥ್ವಿಯ ಪ್ರದಕ್ಷಿಣೆಯಲ್ಲಿ ತೊಡಗಿದನು. ಕರುವನ್ನು ಈಯುತ್ತಿರುವ ತಿಯಲ್ಲಿಯ ಹಸುವು, ಅರ್ಧಪ್ರಸೂತಿಯ ವೇಳೆಗೆ, ಪೃಥ್ವಿಗೆ ಸಮವಿರುತ್ತದೆ ಎಂದು ಮನ್ನಣೆ ಇದ್ದುದರಿಂದ ಗೌತಮನು ಅಂಥ ಹಸುವಿಗೆ ಪ್ರದಕ್ಷಿಣೆ ಮಾಡಿ ಬ್ರಹ್ಮದೇವನ ಪಣವನ್ನು ಪೂರ್ತಿಗೊಳಿಸಿದನು. ಅಹಲ್ಯೆಯೊಡನೆ ಗೌತಮನು ವಿವಾಹಬದ್ಧನಾದನು. ಪೃಥ್ವಿಯ ಪ್ರದಕ್ಷಿಣೆಯನ್ನು ಮಾಡಿ ಬಂದ ದೇವತೆಗಳಿಗೆ, ಗೌತಮ-ಅಹಲ್ಯೆಯರ ವಿವಾಹದ ವಿಷಯವು ತಿಳಿದಾಗ ಅವರೆಲ್ಲರೂ ಅತಿ ದುಃಖಿತರಾದರು. ಇಂದ್ರನು ಅಹಲ್ಯೆಯ ಬಗ್ಗೆ ತುಂಬ ಅಭಿಲಾಷೆಯನ್ನು ಇಟ್ಟು ಕೊಂಡಿದ್ದರಿಂದ ಆತನು ಬಲು ಖಿನ್ನನಾದನು. ಒಮ್ಮೆ ಗೌತಮನು ಮನೆಯಲ್ಲಿ ಇಲ್ಲದ್ದನ್ನು ನೋಡಿ ಇಂದ್ರನು ಗೌತಮನ ವೇಷವನ್ನು ಧರಿಸಿ ಅಹಲ್ಯೆಯನ್ನು ಸಮೀಪಿಸಿ ಸಮಾಗಮದ ಇಚ್ಛೆಯನ್ನು ವ್ಯಕ್ತಪಡಿಸಿದನು. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಪ್ರಕಾರ ಇಂದ್ರನು ಗೌತಮನ ವೇಷವನ್ನು ಧರಿಸಿಬಂದ ವಿಷಯವನ್ನು