ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಅಹಲ್ಯೆಯು ಅರಿತಿದ್ದರೂ, ಅವಳಿಗೆ ಇಂದ್ರನೊಡನೆ ಸುಖದ ಇಚ್ಛೆಯಿತ್ತು. ಸಮಾಗಮವಾದನಂತರ 'ನಾನು ಕೃತಾರ್ಥಳಾದೆನು; ನೀನು ಇಲ್ಲಿಂದ ಬೇಗ ಹೊರಡು!” ಎಂದು ಇಂದ್ರನಿಗೆ ಸೂಚಿಸಿದಳು. ಗೌತಮನಿಂದ, ತನ್ನ ಹಾಗೂ ಇಂದ್ರನ ರಕ್ಷಣೆಯಾಗುವಂತೆ ಮಾಡಬೇಕೆಂದು ಇಂದ್ರನಿಗೆ ಹೇಳಿದಳು. ಅಹಲ್ಯೆಗೆ ಇಂದ್ರನು ಮೋಸ ಮಾಡಿದ ವಿಷಯ ಗೊತ್ತಾಗದೆ ಅವಳಿಂದ ಪ್ರಮಾದ ನಡೆಯಿತೆಂದು ಉತ್ತರಕಾಂಡದಲ್ಲಿ ಹೇಳಲಾಗಿದೆ. ಇಂದ್ರನು ಅಹಲ್ಯೆಯ ಬಳಿ ಮೇಲಿಂದ ಮೇಲೆ ಬರುತ್ತಿದ್ದನೆಂದು ಬ್ರಹ್ಮ-ಪುರಾಣದಲ್ಲಿದೆ. ಗೌತಮನು ಇಲ್ಲದಾಗ ಇಂದ್ರನು ಬರುತ್ತಿದ್ದ ಸಂಗತಿಯನ್ನು ಗೌತಮನ ಶಿಷ್ಯರು ಆತನಿಗೆ ತಿಳಿಸಿದರು. ಆಗ ಗೌತಮನು ಇಂದ್ರ ಮತ್ತು ಅಹಲ್ಯೆ ಇಬ್ಬರನ್ನೂ ಶಪಿಸಿದನು. ಅಹಲ್ಯೆಗೆ ದೊರೆತ ಶಾಪದ ಸ್ವರೂಪವು ಬೇರೆಬೇರೆ ಗ್ರಂಥಗಳಲ್ಲಿ ಬೇರೆಬೇರೆಯಾಗಿದೆ. 'ನೀನು ಯಾರ ದೃಷ್ಟಿಗೂ ಬೀಳಲಾರೆ! ಕೇವಲ ವಾಯುವನ್ನು ಸೇವಿಸಿ ಬಾಳುವೆ! ನೀನು ರೂಪಹೀನಳಾಗುವೆ!' ಎಂಬ ಶಾಪವು ವಾಲ್ಮೀಕಿರಾಮಾಯಣದಲ್ಲಿದೆ. ಆನಂದ ರಾಮಾಯಣ, ಸ್ಕಂದಪುರಾಣ ಹಾಗೂ ಗಣೇಶಪುರಾಣಗಳನುಸಾರ 'ನೀನು ಶಿಲೆಯಾಗುವೆ' ಎಂಬ ಶಾಪದ ಉಲ್ಲೇಖವಿದೆ. 'ನಿನ್ನ ದೇಹವು ಕೇವಲ ಅಸ್ಥಿಚರ್ಮ ವುಳ್ಳದ್ದಾಗುವದು; ಜೀವಿತ ಪ್ರಾಣಿಗಳಲ್ಲಿ ಮಾಂಸ, ಉಗುರುಗಳು ಬೆಳೆಯುವಂತೆ ನಿನ್ನಲ್ಲಿ ಬೆಳೆಯಲಾರವು; ನಿನ್ನ ಈ ವಿದ್ರೂಪತೆಯಿಂದ ಸ್ತ್ರೀಯರಿಗೆ ಪಾಪಕರ್ಮದ ಬಗ್ಗೆ ಭಯವುಂಟಾಗುವದು' ಎಂಬ ಶಾಪದ ವಿವರವನ್ನು ಪದ್ಮಪುರಾಣದಲ್ಲಿ ಬಣ್ಣಿಸಿದ್ದಾರೆ. ಇದೇ ರೀತಿ ಉಃಶಾಪಗಳಲ್ಲಿಯೂ ಭಿನ್ನತೆಯು ಕಂಡುಬರುತ್ತದೆ. 'ದಶರಥಪುತ್ರನಾದ ದುರ್ಧರ್ಷ ರಾಮನು ಈ ಘೋರ ಅರಣ್ಯಕ್ಕೆ ಬಂದಾಗ ಲೋಭಮೋಹರಹಿತಳಾದ ನೀನು ಆತನನ್ನು ಸತ್ಕರಿಸುವದರಿಂದ ಶುದ್ಧಳಾಗುವೆ; ಅನಂತರ ಶುದ್ಧಿಗೊಂಡ ನೀನು ನಿನ್ನ ನಿಜರೂಪ ಪಡೆದು ನನ್ನನ್ನು ಸಮೀಪಿಸುವೆ' ಎಂದು ವಾಲ್ಮೀಕಿಯು ಹೇಳಿದ್ದಾನೆ. ಸ್ಕಂದ ಪುರಾಣದಲ್ಲಿ 'ಗೌತಮನು ಇವಳ ಮುಕ್ತಿಗಾಗಿ ಕೋಟಿತೀರ್ಥದಲ್ಲಿ ತಪಸ್ಸನ್ನಾಚರಿಸಿದನು; ಆಗ ಅಹಲ್ಯೆಯು ಮುಕ್ತಳಾದಳು; ಅಲ್ಲಿ ಅಹಲ್ಯಾ ಸರೋವರವು ನಿರ್ಮಾಣವಾಯಿತು' ಎಂಬ ಉಲ್ಲೇಖವಿದೆ.
ತಪಸ್ಸಿನಿಂದ ಪರಿಶಿಶುದ್ಧಳಾದ ನಂತರ ಗೌತಮನೊಡನೆ ಪುನರ್ಮಿಲನ ವಾಯಿತು. ಬ್ರಹ್ಮಪುರಾಣದಲ್ಲಿ ಅಹಲ್ಯೆಯನ್ನು 'ಗೌತಮಿ' ಎಂದು ಉಲ್ಲೇಖಿಸ ಲಾಗಿದೆ. ಇಂದ್ರನೊಡನೆ ಸಂಬಂಧ ಬರುವ ಮೊದಲೇ ಈಕೆಗೆ ಗೌತಮನಿಂದ 'ಶತಾನಂದ' ಎಂಬ ಮಗನು ಹುಟ್ಟಿದ್ದನು. ಗೌತಮನ ಶಿಷ್ಯನಾದ ಉತ್ತಂಕನಿಗೆ