ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ನಹುಷ, ಹಿರಣ್ಯಕಶಿಪು, ಬಲಿ, ಪ್ರಹ್ಲಾದ- ಇವರೆಲ್ಲರೂ ಕೆಲವು ಕಾಲ ಇಂದ್ರರಾಗಿದ್ದರು. ಇಂದ್ರನು ಮಳೆಯ ದೇವತೆಯಾಗಿದ್ದಾನೆ.
ರಾಮಾಯಣ, ಮಹಾಭಾರತ ಮೊದಲಾದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ಇಂದ್ರನೆಂದರೆ ಅದಿತಿಪುತ್ರನಾದ ಶಕ್ರನಾಗಿದ್ದಾನೆ. ಈತನು ದೇವತೆಗಳ ರಾಜನಿದ್ದು ಇಂದ್ರಾಣಿ ಶಚಿಯು ಆತನ ಪತ್ನಿಯಗಿರುತ್ತಾಳೆ. ನೂರು ಯಜ್ಞಗಳನ್ನು ಮಾಡಿದರೆ ಇಂದ್ರಪದವು ದೊರೆಯುತ್ತಿದ್ದುದರಿಂದ ಅಷ್ಟು ಯಜ್ಞಗಳು ಪೂರ್ಣವಾಗುವ ಮೊದಲೇ ಇವನು ಅಶ್ವಮೇಧಯಾಗದ ಕುದುರೆಯನ್ನು ಅಪಹರಿಸಿ ಯಜ್ಞದಲ್ಲಿ ವಿಘ್ನವನ್ನುಂಟುಮಾಡುತ್ತಿದ್ದನು. ಯಾರಾದರೂ ಉಗ್ರ ತಪಸ್ಸನ್ನು ಕೈಗೊಂಡಾಗ ಅವರ ತಪೋಭಂಗವನ್ನು ಮಾಡಲು ಅಪ್ಸರೆಯನ್ನು ಕಳುಹಿಸುತ್ತಿದ್ದನು. ವಿಶ್ವಾಮಿತ್ರನ ತಪಸ್ಸನ್ನು ಕೆಡಿಸಲು ಅವನು ರಂಭೆಯನ್ನು ಕಳುಹಿಸಿದ್ದನು. ಯಮನ ತಪವನ್ನು ಹಾಳುಮಾಡಲು 'ಗಣಿಕಾ' ಎಂಬ ಅಪ್ಸರೆಯನ್ನು ನೇಮಿಸಿದನು. ಗೌತಮಋಷಿಯ ವೇಷದಲ್ಲಿ ಬಂದು ಅಹಲ್ಯೆಯನ್ನು ಸಂಭೋಗಿಸಿದನು. ಆಗ ಗೌತಮನ ಶಾಪದಿಂದ ವೃಷಣ ಹೀನನಾದನು. ಗೌತಮನ ತಪಸ್ಸನ್ನು ಹರಣ ಮಾಡುವದು ಒಂದು ದೇವತಾ ಕಾರ್ಯವೆಂದು ತಾನು ಈ ಕೃತ್ಯವನ್ನು ಮಾಡಿದ್ದರಿಂದ ತನಗೆ ವೃಷಣಗಳು ಪುನಃ ದೊರಕಬೇಕು ಎಂಬ ಇಚ್ಛೆಯನ್ನು ಇಂದ್ರನು ಪ್ರಕಟಿಸಿದಾಗ, ಪಿತೃದೇವತೆಗಳೆಲ್ಲರೂ ಸೇರಿ ಈತನಿಗೆ 'ಮೇಷವೃಷಣ'ನನ್ನಾಗಿ ಮಾಡಿದರು. ವಾಚಕ್ನವೀ ಮುನಿಯ 'ಮುಕುಂದಾ' ಹೆಸರಿನ ಪತ್ನಿಯು ರುಕ್ಮಾಂಗದನಲ್ಲಿ ಮೋಹಿತಳಾಗಿದ್ದಳು. ಆಗ ಇಂದ್ರನು ರುಕ್ಮಾಂಗದನ ವೇಷವನ್ನು ತಾಳಿ ಅವಳನ್ನು ಉಪಭೋಗಿಸಿದನು. ಈ ಘಟನೆಯು ಅಹಲ್ಯೆಯ ಸಂದರ್ಭದ ಘಟನೆಯಂತಿದೆ. ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪು ಇವರ ವಧೆಯನ್ನು ಇಂದ್ರನು ಮಾಡಿಸಿದನು. ಅಗ ದಿತಿಯು ಕಶ್ಯಪನಿಂದ ಇಂದ್ರನನ್ನು ಕೊಲ್ಲುವಂಥ ಪುತ್ರನನ್ನು ಬೇಡಿಕೊಂಡಳು. ಆಗ ಕಶ್ಯಪನು ಒಂದು ಷರತ್ತನ್ನು ದಿತಿಯ ಮುಂದಿಟ್ಟನು. ದಿತಿಯಿಂದ ಆ ಷರತ್ತಿನ ಪಾಲನೆಯಾಗಲಿಲ್ಲ. ಆಗ ಇಂದ್ರನು ದಿತಿಯ ಉದರವನ್ನು ಪ್ರವೇಶಿಸಿ, ಅಲ್ಲಿದ್ದ ಗರ್ಭವನ್ನು ಏಳು ಭಾಗಗಳನ್ನಾಗಿ ತುಂಡರಿಸಿದನು. ದುರ್ವಾಸಋಷಿಯು ಇಂದ್ರನಿಗೆ ಒಂದು ಕೊರಳ ಮಾಲೆಯನ್ನು ಕೊಟ್ಟಿದ್ದನು. ಅದನ್ನು ಅನಾದರಿಸಿದ ಕಾರಣ ದುರ್ವಾಸನು ಇಂದ್ರನಿಗೆ ಶಾಪವನ್ನು ಕೊಟ್ಟನು. ವಿಶ್ವಾಮಿತ್ರನ ನೆರವಿನಿಂದ ಸ್ವರ್ಗವನ್ನು ಸೇರಿದ ತ್ರಿಶಂಕುವನ್ನು ಇಂದ್ರನು ತಲೆಕೆಳಗಾಗುವಂತೆ ಮಾಡಿ ನೂಕಿ ಭೂಮಿಯತ್ತ ತಳ್ಳಿದನು. ಶರಭಂಗ ಋಷಿಯನ್ನು ಬ್ರಹ್ಮಲೋಕಕ್ಕೆ ಕರೆದೊಯ್ಯಲು