ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೯೧

ಕೊಂಡನು. ಬ್ರಹ್ಮದೇವನು ಅದಕ್ಕೆ ಒಪ್ಪಿಕೊಂಡನು. ನಿದ್ರೆಯ ವರವನ್ನು
ಬೇಡಿಕೊಂಡಿದ್ದಕ್ಕೆ ಕುಂಭಕರ್ಣನಿಗೆ ಪಶ್ಚಾತ್ತಾಪವಾಯಿತು. ಕುಬೇರನ ಲಂಕಾ
ನಗರವನ್ನು ರಾವಣನು ದೋಚಿಕೊಂಡ ನಂತರ ಕುಂಭಕರ್ಣನು ಕೂಡ ಲಂಕೆಯಲ್ಲಿ
ಉಳಿದನು. ವಿರೋಚನಪುತ್ರನೆಂದರೆ ಬಲಿರಾಜ. ಈತನ ಮೊಮ್ಮಗಳು ವಜ್ರಜ್ವಾಲಾ.
ಕುಂಭಕರ್ಣನ ವಿವಾಹವು ವಜ್ರಜ್ವಾಲೆಯೊಡನೆ ನಡೆಯಿತು. ಈತನು ನಿದ್ರೆಯಿಂದ
ಎಚ್ಚತ್ತಿದ್ದ ದಿನದಂದು ರಾವಣನ ಸಭೆಗೆ ಹಾಜರಾಗಿರುತ್ತಿದ್ದನು. ಸೀತಾಪಹರಣ
ಮಾಡಿದುದಕ್ಕಾಗಿ ಈತನು ರಾವಣನನ್ನು ದೂಷಿಸಿದನು. ಏನಿದ್ದರೂ ರಾವಣನಿಗೆ
ಎಲ್ಲ ವಿಧವಾಗಿ ನೆರವಾಗುವುದಾಗಿ ವಚನವನ್ನಿತ್ತನು. ಅನೇಕ ವೀರಭಟರನ್ನು
ವಧಿಸಿ ರಾಮನು ರಾವಣನನ್ನು ಪರಾಜಯಗೊಳಿಸಿದನು. ಆ ಸಮಯದಲ್ಲಿ ಕುಂಭ
ಕರ್ಣನನ್ನು ಎಚ್ಚರಿಸಲು ತುಂಬಾ ಪ್ರಯತ್ನ ಮಾಡಿದರು. ಕೊನೆಗೆ ಕುಂಭಕರ್ಣನು
ಎಚ್ಚತ್ತು ಯುದ್ಧಕ್ಕೆ ಸಜ್ಜಾದನು. ರಾವಣನಿಗೆ ಹಿತವಚನಗಳನ್ನಾಡಿದನು
'ಮಹೋದರ'ನೆಂಬಾತನು ರಾವಣನ ವಧೆಯಾಯಿತೆಂಬ ಸುಳ್ಳು ಸುದ್ದಿಯನ್ನು
ಹರಡಿಸಿ, ಸೀತೆಯನ್ನು ವಶಪಡಿಸಿಕೊಳ್ಳಬೇಕೆಂದು ಅವನಿಗೆ ಸೂಚಿಸಿದನು.
ಕುಂಭಕರ್ಣನು ಈ ಸೂಚನೆಯನ್ನು ತಿರಸ್ಕರಿಸಿದನು. ಕುಂಭಕರ್ಣನು ಯುದ್ದಕ್ಕೆ
ನಿಂತಾಗ, ಅವನನ್ನು ದೃಷ್ಟಿಸಿದ ವಾನರರೆಲ್ಲರೂ ಅಂಜಿ ದಿಕ್ಕೆಟ್ಟು ಓಡತೊಡಗಿದರು.
ಅಂಗದನು ಆ ವಾನರರಿಗೆ ಧೈರ್ಯಕೊಟ್ಟು ಅವರನ್ನು ಪುನಃ ಒಟ್ಟುಗೂಡಿಸಿದನು.
ಕುಂಭಕರ್ಣನು ಹನುಮಂತನಿಗೆ ಗಾಯಮಾಡಿದನು. ಋಷಭ, ಶರಭ, ನೀಲ,
ಗವಾಕ್ಷ- ಇವರೆಲ್ಲರೂ ನೆತ್ತರನ್ನು ಕಾರುವಂತಾದರು. ಕುಂಭಕರ್ಣನು ಎಸೆದ
ಶೂಲದಿಂದ ಅಂಗದನು ಬಲು ಚಾತುರ್ಯದಿಂದ ತಪ್ಪಿಸಿಕೊಂಡನು. ಅನಂತರ
ಅಂಗದನು ಕುಂಭಕರ್ಣನ ಎದೆಗೆ ಬಲು ಬಿರುಸಾದ ಏಟನ್ನು ಕೊಟ್ಟು ಆತನನ್ನು
ಮೂರ್ಛೆಗೊಳಿಸಿದನು. ಪ್ರಜ್ಞೆ ಬಂದ ನಂತರ ಕುಂಭಕರ್ಣನು ಅಂಗದನನ್ನು
ಮೂರ್ಛೆಗೊಳಿಸಿದನು. ಸುಗ್ರೀವನನ್ನು ಕರೆದುಕೊಂಡು ಕುಂಭಕರ್ಣನು ಲಂಕೆಯತ್ತ
ನಡೆದಾಗ ಸುಗ್ರೀವನು ಕುಂಭಕರ್ಣನ ಕಿವಿಮೂಗುಗಳನ್ನು ಕತ್ತರಿಸಿಬಿಟ್ಟನು.
ರಾಮನು ಶರಗಳಿಂದ ಕುಂಭಕರ್ಣನ ಕಾಲುಗಳನ್ನು ಕತ್ತರಿಸಿದನು. ಆಗ
ಕುಂಭಕರ್ಣನು ಭೂಮಿಗೆ ಕುಸಿದನು. ಈ ಅವಸ್ಥೆಯಲ್ಲಿಯೂ ಆತನು ರಾಮನತ್ತ
ನುಗ್ಗಿ ಬರಲು ಯತ್ನಿಸುತ್ತಿದ್ದಾಗ ರಾಮನು ಐಂದ್ರಬಾಣಗಳಿಂದ ಕುಂಭಕರ್ಣನ
ಶರವನ್ನು ಹಾರಿಸಿದನು. ಕುಂಭಕರ್ಣನು ಮೃತನಾದನು. ಈತನಿಗೆ ಕುಂಭ-
ನಿಶುಂಭರೆಂಬ ಇಬ್ಬರು ಬಲಶಾಲಿಗಳಾದ ಪುತ್ರರಿದ್ದರು. ವಿಭೀಷಣ ಮತ್ತು
ಶೂರ್ಪನಖಿ ಕುಂಭಕರ್ಣನ ವೀರತ್ವವನ್ನು ಬಹುವಾಗಿ ವರ್ಣಿಸಿದ್ದಾರೆ.