ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸಾಧ್ಯವಾಗುತ್ತಿದ್ದರೂ ಅದರ ಪ್ರಮಾಣ ಕಡಿಮೆ. “A curse or blessing is a wish expressed in words that evil or good may befall a certain person” ಕೆಟ್ಟದನ್ನು ಬಯಸಿ ಉಚ್ಚರಿಸಿದರೆ, ಶಾಪ, ಒಳಿತನ್ನು ಬಯಸಿ ಉಚ್ಚರಿಸಿದರೆ ಅದು ವರ. ಇವೆರಡರಲ್ಲೂ ಕೊಡುವವನ ಉತ್ಕಟ ಇಚ್ಛೆ ಹಾಗೂ ಶಬ್ದಗಳ ಉಚ್ಚಾರಣೆ ಮತ್ತು ಕೊಡುವಾತನ ಸಾಮರ್ಥ್ಯ- ಈ ಮೂರು ಸಂಗತಿಗಳು ಮಹತ್ತ್ವಪೂರ್ಣ ವಿರುತ್ತವೆ. ಇಚ್ಛಾಶಕ್ತಿ ಮತ್ತು ಅಧಿಕಾರ ಎಷ್ಟೇ ಇದ್ದರೂ ಶಬ್ದೋಚ್ಚಾರವಾಗುವವರೆಗೆ ಪರಿಣಾಮವು ದರ್ಶಿತವಾಗುವುದಿಲ್ಲ. ಹೀಗಿರುವುದರಿಂದ ಅಭಿವ್ಯಕ್ತಿಗೆ, ಶಬ್ದೋಚ್ಚಾರಣೆಗೆ ಬಹಳ ಮಹತ್ವವಿದೆ. ಈ ರೀತಿ ಒಮ್ಮೆ ಇಚ್ಛೆಯನ್ನು ಪ್ರಕಟಪಡಿಸಿದ ನಂತರ ಅದನ್ನು ಹಿಂದಿರುಗಿಸುವುದು ಸಾಧ್ಯವಿಲ್ಲ. ಅದರಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಪರಿಣಾಮಗಳು ಖಚಿತವಾಗುತ್ತವೆ. ಶಬ್ಬೊಚ್ಚಾರದ ಪರಿಣಾಮವು ಸುಳ್ಳಾಗುವುದಿಲ್ಲ. ಅದು ತಪ್ಪುವಂತಿದ್ದರೆ ಶಾಪ-ವರವೆಂದೆನಿಸಿಕೊಳ್ಳಲಾರದು. ಕಾಮಮೋಹಿತ ಕ್ರೌಂಚಪಕ್ಷಿಗಳ ಜೋಡಿಯಲ್ಲಿಯ ಗಂಡುಪಕ್ಷಿಯನ್ನು ನಿಷಾದನು ಗುರಿ ಇಟ್ಟು ಕೊಂದಕಾರಣ ವಾಲ್ಮೀಕಿಯ ಮುಖದಿಂದ ಶಾಪದ ಉಚ್ಚಾರಣೆ ಯಾಯಿತು. ವಾಲ್ಮೀಕಿಗೆ ನಂತರ ಶಾಪ ನುಡಿದ ಬಗ್ಗೆ ವ್ಯಥೆಯಾದರೂ ಅದರಲ್ಲಿ ಬದಲಾವಣೆ ಮಾಡಲಾಗಲಿಲ್ಲ; ಅದನ್ನು ಹಿಂತೆಗೆದುಕೊಳ್ಳಲಾಗಲಿಲ್ಲ. ರಾಮಾಯಣದಲ್ಲಿ ವರಗಳು ಸುಳ್ಳಾಗುವ ಎರಡು ಪ್ರಸಂಗಗಳು ಬಂದಿವೆ. ಯಮನು ರಾವಣನೊಡನೆ ಯುದ್ಧ ಮಾಡುತ್ತಿದ್ದಾಗ ರಾವಣನನ್ನು ಸಾಯಿಸಲು ಯಮನು ಕಾಲದಂಡವನ್ನು ಎತ್ತಿಕೊಂಡನು. ಕಾಲದಂಡವನ್ನು ಬ್ರಹ್ಮನು ಸೃಷ್ಟಿಸಿದನು. ಅದನ್ನು ಬಳಸಿದರೆ ರಾವಣನ ಮೃತ್ಯುವು ತಪ್ಪುತ್ತಿರಲಿಲ್ಲ. ಆದರೆ, ಮಾನವನ ಹೊರತಾಗಿ ರಾವಣನಿಗೆ ಮರಣ ಬಾರದು! ಎಂಬ ವರವನ್ನು ಬ್ರಹ್ಮನೇ ಕೊಟ್ಟಿದ್ದನು. ಹೀಗಿದ್ದುದರಿಂದ ರಾವಣನು ಕಾಲದಂಡದಿಂದ ಮೃತನಾಗಿದ್ದರೆ ಬ್ರಹ್ಮನು ಕೊಟ್ಟ ವರವು ಸುಳ್ಳಾಗುತ್ತಿತ್ತು; ಆದ್ದರಿಂದ ಬ್ರಹ್ಮನು, ತನ್ನ ವರವನ್ನು ನಿಜಗೊಳಿಸಲು ಯಮನನ್ನು ಯುದ್ಧದಿಂದ ಪರಾವೃತ್ತಗೊಳಿಸಿದನು. ಎರಡನೇ ಪ್ರಸಂಗದಲ್ಲಿ ನಿವಾತಕವಚ ಹಾಗೂ ರಾವಣ ಇವರಲ್ಲಿ ಕಾಳಗ ನಡೆದಿತ್ತು. ಇಬ್ಬರೂ ವರಗಳನ್ನು ಪಡೆದಿದ್ದುದರಿಂದ ಅನೇಕ ದಿನಗಳ ಕಾಳಗ ನಡೆದರೂ ಯಾರೊಬ್ಬರ ಸೋಲು-ಗೆಲುವು ಆಗಲಿಲ್ಲ. ಅವರಲ್ಲಿ ಒಬ್ಬನಾದರೂ ಜಯ ಹೊಂದಿದ್ದರೆ, ಕೊಟ್ಟ ವರವು ಸುಳ್ಳಾಗುತ್ತಿತ್ತು. ಬ್ರಹ್ಮದೇವನು

——————

೫. Encyclopaedia of Religion and Ethics, p. 367.