ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೯೯


ಸಾಧ್ಯವಿರಲಿಲ್ಲ. ಆಗ ಗಾಲವನು ವಿಷ್ಣುವನ್ನು ಆರಾಧಿಸಿದನು. ಈತನ ಭಕ್ತಿಭಾವಕ್ಕೆ
ಮೆಚ್ಚಿ ವಿಷ್ಣುವು ಗರುಡನಿಗೆ ಗಾಲವನ ಇಚ್ಛೆಯನ್ನು ನಡೆಸಿಕೊಡಲು ಹೇಳಿದನು.
ಗರುಡನು ಗಾಲವನನ್ನು ಯಯಾತಿಯ ಬಳಿಗೆ ಕರೆದುಕೊಂಡು ಹೋದನು.
ಈ ಎಂಟುನೂರು ಶ್ಯಾಮಕರ್ನ ಕುದುರೆಗಳನ್ನು ಕೊಡುವದು ಯಯಾತಿಗೂ
ಸಾಧ್ಯವಿರಲಿಲ್ಲ. ಹೀಗಿದ್ದರೂ ಯಯಾತಿಯು ತನ್ನ ಮಗಳಾದ ಮಾಧವಿಯನ್ನು,
ಅವಳಿಂದ ಆಗುವ ಪುತ್ರರ ಮೇಲೆ ಬಾಧ್ಯತೆಯನ್ನಿಟ್ಟುಕೊಂಡು ಗಾಲವನಿಗೆ
ಒಪ್ಪಿಸಿದನು. ಮಾಧವಿಯ ಮೂಲಕ ಗಾಲವನು ತನ್ನ ಗುರುದಕ್ಷಿಣೆಯನ್ನು
ಪೂರ್ತಿಗೊಳಿಸಿದನು.
ವಿಶ್ವಾಮಿತ್ರನ ಒಬ್ಬ ಪುತ್ರನ ಹೆಸರು ಸಹ ಗಾಲವನೆಂದಿದೆ. ಬರಗಾಲವು
ಬಂದೊದಗಿದಾಗ ಹೆಂಡತಿಮಕ್ಕಳ ಹೊಟ್ಟೆಯ ಪಾಡನ್ನು ಗಮನಿಸದೆ, ವಿಶ್ವಾಮಿತ್ರನು
ತಪಸ್ಸಿಗಾಗಿ ಹೊರಟುಹೋದನು. ವಿಶ್ವಾಮಿತ್ರನ ಹೆಂಡತಿಯು ಅತ್ಯಂತ ಭೀಕರ
ಪರಿಸ್ಥಿತಿಯನ್ನೆದುರಿಸಿ ಮಕ್ಕಳ ರಕ್ಷಣೆಯ ಯತ್ನ ಮಾಡಿದಳು. ಉದರ ನಿರ್ವಹಣೆಗೆ
ಏನು ಸಿಗದಿದ್ದುದರಿಂದ ಮಕ್ಕಳು ಹಸಿವೆಯಿಂದ ಕಸಿವಿಸಿಗೊಂಡರು. ಆಗ
ಅವಳು ಈ ಮಕ್ಕಳನ್ನು ಮಾರಲು ಯೋಚಿಸಿದಳು. ಸತ್ಯವ್ರತನು ಇವಳ ಕುಶಲವನ್ನು
ವಿಚಾರಿಸಿಕೊಂಡು ವಿಶ್ವಾಮಿತ್ರನು ಮರಳಿ ಬರುವವರೆಗೆ ಇವರ ನಿರ್ವಹಣೆಯನ್ನು
ತುಸುಮಟ್ಟಿಗೆ ವಹಿಸಿಕೊಂಡನು.

೩೯. ಗೌತಮ

ಇವನು ಬೃಹಸ್ಪತಿಯ ಶಾಪದಿಂದ ಹುಟ್ಟುಕುರುಡನಾಗಿದ್ದ, ಅಂಗೀರಸ
ಕುಲದಲ್ಲಿ ಜನಿಸಿದ. ದೀರ್ಘತಮಾ ಮತ್ತು ಪ್ರದ್ವೇಷಿ ಇವರ ಮಗನಾಗಿದ್ದನು.
ಇವನು ವೈವಸ್ವತ ಮನ್ವಂತರದಲ್ಲಿಯ ಸಪ್ತರ್ಷಿಗಳಲ್ಲಿ ಒಬ್ಬನು, ಬ್ರಹ್ಮದೇವನ
ಮಾನಸಪುತ್ರಿಯಾದ ಅಹಲ್ಯೆಯು ಗೌತಮನ ಪತ್ನಿಯಾಗಿದ್ದಳು. ಇವಳಿಂದ
ಹುಟ್ಟಿದ ಮಗನಾದ ಶತಾನಂದನು ಜನಕರಾಜನ ಪುರೋಹಿತನಾಗಿದ್ದನು. ಅವನ
ಶಿಷ್ಯನಾದ ಉತ್ತಂಕನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡನು. ಮಿಥಿಲಾ
ಪಟ್ಟಣದ ಸಮೀಪದ ವನದಲ್ಲಿ ಪಾರಿಯಾತ್ರ ಪರ್ವತದ ಹತ್ತಿರ ಗೌತಮನ
ಆಶ್ರಮವಿತ್ತು. ಈತನು ಅರವತ್ತು ಸಾವಿರ ವರ್ಷಗಳ ಕಾಲ ತಪಸ್ಸನ್ನು ಆಚರಿಸಿದನೆಂದು
ಹೇಳುತ್ತಾರೆ. ತಪಸ್ಸಿನಿಂದ ಶಂಕರನು ಪ್ರಸನ್ನನಾಗಿ ಗೌತಮನಿಗೆ ಗಂಗೆಯನ್ನು
ಅರ್ಪಿಸಿದನು. ಅವಳೇ ಗೌತಮಿ ಎಂಬ ಹೆಸರಿನಿಂದ ಪ್ರಸಿದ್ಧಳಾಗಿದ್ದಾಳೆ. ಕ್ಷಾಮ
ಬಂದಾಗ ಋಷಿಗಳಿಗೆ ಊಟ ಹಾಕಿ ಅವರನ್ನು ಬದುಕಿಸಿದನು. ಇವನೊಬ್ಬ