ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೪೦೦
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
 


ಧರ್ಮಶಾಸ್ತ್ರಕಾರ. 'ಗೌತಮಸ್ಮೃತಿ' ಎಂಬ ಈತನು ಬರೆದ ಗ್ರಂಥವು ಪ್ರಸಿದ್ಧವಿದೆ.
ಇದಲ್ಲದೆ, ಆಸ್ತಿಕಸೂತ್ರ, ಪಿತೃಮೇಧಸೂತ್ರ, ದಾನಚಂದ್ರಿಕಾ, ಗೌತಮೀಶಿಕ್ಷಾ,
ನ್ಯಾಯಸೂತ್ರ ಮೊದಲಾದ ಗ್ರಂಥಗಳನ್ನು ಈತನು ಬರೆದಿದ್ದಾನೆ.

೪೦. ಗ್ರಾಮಣಿ, ದೇವವತಿ

ಋಷಭಪರ್ವತದಲ್ಲಿಯ ಗಂಧದ ವನವನ್ನು ರಕ್ಷಿಸಲು ಐವರು ಗಂಧರ್ವ
ರಿದ್ದರು. ದೇವವತಿಯು ಅವರಲ್ಲಿಯ ಒಬ್ಬ ಗಂಧರ್ವನ ಮಗಳು. ಇವಳು
ಸುಕೇಶ ರಾಕ್ಷಸನ ಪತ್ನಿಯಾಗಿದ್ದಳು. ಈಕೆಗೆ ಮಾಲ್ಯವಾನ, ಸುಮಾಲಿ ಮತ್ತು
ಮಾಲಿ ಎಂಬ ಮಕ್ಕಳಿದ್ದರು.

೪೧. ಘೃತಾಚಿ

ಕಶ್ಯಪನ ಪತ್ನಿಯ ಹೆಸರು ಪ್ರಾಧಾ ಎಂದಿತ್ತು. ಇವಳಿಗೆ ಹುಟ್ಟಿದ ಅಪ್ಸರೆಯಲ್ಲಿ
ಘೃತಾಚಿಯೂ ಒಬ್ಬಳು. ಘೃತಾಚಿಯನ್ನು ಕಂಡಕ್ಷಣವೇ ಭರದ್ವಾಜನ ವೀರ್ಯ
ಸ್ಖಲನವಾಯಿತು. ಈ ವೀರ್ಯದಿಂದಲೇ ದ್ರೋಣಾಚಾರ್ಯನು ಹುಟ್ಟಿದನು.
ಇವಳಿಗೆ ವ್ಯಾಸನಿಂದ ಶುಕನು ಜನಿಸಿದನು. ಪ್ರಯತಿ ಋಷಿಯಿಂದ ಇವಳಿಗೆ
'ರುರು' ಎಂಬ ಪುತ್ರನಾದನು. ಇವಳಿಗೆ ಒಟ್ಟು ಹತ್ತು ಗಂಡುಮಕ್ಕಳಾದರು.
ವಿಶ್ವಾಮಿತ್ರನು ಇವಳಲ್ಲಿ ಆಸಕ್ತನಾಗಿದ್ದನು. ಘೃತಾಚಿಯ ಸಹವಾಸದಲ್ಲಿ ಕಳೆದ
ಹತ್ತು ವರ್ಷಗಳ ಕಾಲವೂ ಒಂದು ದಿನದಂತೆ ಮಾತ್ರ ಭಾಸವಾಯಿತೆಂದು
ವಿಶ್ವಾಮಿತ್ರನಿಗೆನಿಸಿತೆಂಬ ಉಲ್ಲೇಖವು ಕಿಷ್ಕಿಂಧಾಕಾಂಡ(೩೫/೭)ದಲ್ಲಿದೆ.
ವಿಶ್ವಕರ್ಮನೊಡನೆ ಇವಳ ಸಂಪರ್ಕವು ಬಂದಾಗ ಅವನು 'ನೀನು
ಪೃಥ್ವಿಯಲ್ಲಿ ಶೂದ್ರರ ಮನೆಯಲ್ಲಿ ಹುಟ್ಟುವೆ!' ಎಂಬ ಶಾಪವನ್ನಿತ್ತನು. ಆ ಪ್ರಕಾರ
ಅವಳು ಗೋಪನ ಮನೆಯಲ್ಲಿ ಜನ್ಮಹೊಂದಿದಳು. ಪೂರ್ವಜನ್ಮದ ಸ್ಮರಣೆ
ಇವಳಿಗೆ ಇದ್ದುದರಿಂದ ಇವಳು ವಿವಾಹವಾಗಲಿಲ್ಲ. ವಿಶ್ವಕರ್ಮನು ಬ್ರಹ್ಮದೇವನ
ಕೃಪೆಯಿಂದ ಬ್ರಾಹ್ಮಣರ ಮನೆಯಲ್ಲಿ ಜನಿಸಿದನು. ವಿಶ್ವಕರ್ಮ ಮತ್ತು ಘೃತಾಚಿ
ಇವರ ಭೇಟಿಯು ಗಂಗಾನದೀ ತೀರದಲ್ಲಿ ಪ್ರಯಾಗದಲ್ಲಿ ಆಯಿತು. ಪೂರ್ವಜನ್ಮದ
ಸ್ಮರಣೆ ಇವರಿಬ್ಬರಿಗೂ ಇತ್ತು. ಇವರಿಗೆ ತೋಟಗಾರ, ಬಳೆಗಾರ, ಶಿಂಪಿಗ,
ಕುಂಬಾರ, ಅಕ್ಕಸಾಲಿಗ, ಕಲ್ಲುಕುಟಿಗ, ಬಡಗಿ ಮೊದಲಾದವರು ಹುಟ್ಟಿದರೆಂದು
ವ್ಯವಸ್ವತಪುರಾಣದಲ್ಲಿ ಉಲ್ಲೇಖವಿದೆ.