ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ವ್ಯಕ್ತಿ ವಿಶೇಷ
೪೦೩
 


ಗಂಡುಮಕ್ಕಳು ವರದಿಂದ ಹುಟ್ಟಿದರು. ಸ್ಕಂದಪುರಾಣದಲ್ಲಿ ಇವಳು ಕುಶಾಶ್ವ
ಪ್ರಜಾಪತಿಯ ಮಗಳಾಗಿದ್ದು ಪಾರ್ವತಿಯ ದಾಸಿಯಾಗಿದ್ದಳೆಂಬ ಉಲ್ಲೇಖವಿದೆ.
ವಾಮನಪುರಾಣ ಹಾಗೂ ಪದ್ಮಪುರಾಣಗಳಲ್ಲಿ ಇವಳು ಪಾರ್ವತಿಯ
ಗೆಳತಿಯಾಗಿದ್ದಳೆಂದು ಹೇಳಿದೆ. ಸುಪ್ರಭೆಯು ಐವತ್ತು ಶಸ್ತ್ರಾಸ್ತ್ರಗಳನ್ನು ಹಡೆದಳು.

೪೫. ಜಾಂಬವಾನ

ಇವನು ಬ್ರಹ್ಮದೇವನ ಆಕಳಿಕೆಯಿಂದ ಹುಟ್ಟಿದನು- ಎಂದು ವಾಲ್ಮೀಕಿಯು
ಹೇಳಿದ್ದಾನೆ. ಈತನು ಪ್ರಜಾಪತಿ ಹಾಗೂ ರಕ್ಷಾ ಇವರ ಮಗನೆಂದು ಬ್ರಹ್ಮಾಂಡ
ಪುರಾಣದಲ್ಲಿದೆ. ಜಾಂಬವಾನನ ಪತ್ನಿಯ ಹೆಸರು ವ್ಯಾಘ್ರಿ. ಈತನ ಮಗಳ
ಹೆಸರು ಜಾಂಬವತಿ ಎಂದಿತ್ತು. ಈತನು ಋಕ್ಷ ಅಂದರೆ ಕರಡಿಗಳಿಗೆ
ರಾಜನಾಗಿದ್ದನು. ಸೀತೆಯ ಶೋಧವನ್ನು ಮಾಡುವಾಗ ರಾಮನು ಈತನ
ನೆರವನ್ನು ಪಡೆದನು. ರಾವಣನ ವಧೆಯನಂತರ ರಾಮನಿಗಾದ ವಿಜಯವನ್ನು
ಈತನು ತಮ್ಮಟೆ-ತಾಳ ಬಾರಿಸಿ ಘೋಷಿಸಿದನು. ವೃದ್ಧನಾಗಿದ್ದರೂ ತೊಂಬತ್ತು
ಯೋಜನದಷ್ಟು ದೂರ ನೆಗೆಯುವ ಶಕ್ತಿ ಈತನಲ್ಲಿತ್ತು. ಹನುಮಾನನಿಗೆ
ಸ್ವಸಾಮರ್ಥ್ಯದ ನೆನಪನ್ನು ಜಾಂಬವಾನನು ಮಾಡಿಕೊಟ್ಟ ಕಾರಣ ಅವನು
ಲಂಕೆಯತ್ತ ಲಂಘಿಸಲು ಪ್ರವೃತ್ತನಾದನು. ವಿಭೀಷಣನ ಬಗ್ಗೆ ಎಚ್ಚರಿಕೆ
ವಹಿಸಿರಬೇಕೆಂಬ ಸಲಹೆಯನ್ನು ಇವನು ಕೊಟ್ಟಿದ್ದನು. ದೇವಾಸುರರ ಸಂಗ್ರಾಮದಲ್ಲಿ
ಈತನು ಇಂದ್ರನಿಗೆ ನೆರವಾಗಿದ್ದನು. ರಾಮ-ರಾವಣರ ಯುದ್ಧದಲ್ಲಿ ರಾಮನಿಗೆ
ಸಹಾಯ ಮಾಡಿದನು. ರಾಜ್ಯಾಭಿಷೇಕದ ಸಮಯಕ್ಕೆ ನೂರು ನದಿಗಳ ಮತ್ತು
ಸಮುದ್ರದ ನೀರನ್ನು ಈತನು ತಂದು ಪೂರೈಸಿದನು. ರಾಜಸೂಯಯಜ್ಞದ
ಕಾಲಕ್ಕೆ ಶತ್ರುಘ್ನನ ಜೊತೆಗೂಡಿ ಈತನು ಅಶ್ವರಕ್ಷಣೆಯ ಕಾರ್ಯವನ್ನು
ನೆರವೇರಿಸಿದ್ದನು. ರಾಮನು ಇವನಿಗೆ ಅಮೂಲ್ಯವಾದ ಆಭರಣಗಳನ್ನು ಕೊಟ್ಟು
ಸತ್ಕರಿಸಿದನು.

೪೬. ತಾಟಕಿ

ಇವಳು ಸುಕೇತು ಎಂಬ ಯಕ್ಷನ ಮಗಳು. ಈಕೆಯು ಜಂಭಪುತ್ರ ಸುಂದನ
ಹೆಂಡತಿ. ಸುಕೇತುವಿಗೆ ಬ್ರಹ್ಮದೇವನು ಕೊಟ್ಟ ವರದಿಂದ ಇವಳು ಹುಟ್ಟಿದಳು.
ಇವಳಲ್ಲಿ ಸಹಸ್ರ ಆನೆಗಳ ಶಕ್ತಿಯಿದ್ದಿತು. ತನ್ನ ಇಚ್ಛೆಯಂತೆ ಅವಳು ಹಲವು
ರೂಪಗಳನ್ನು ಧರಿಸಬಹುದಿತ್ತು. ಈಕೆಗೆ ಮಾರೀಚ, ಸುಬಾಹು ಎಂಬ ಇಬ್ಬರು