ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೧೯

ಇವರಿಬ್ಬರಲ್ಲಿ ಮೈತ್ರಿಯನ್ನುಂಟುಮಾಡಿ, ಕೊಟ್ಟ ವರಗಳ ಸತ್ಯತೆಯನ್ನು ಕಾಯ್ದನು. (ವಾಲ್ಮೀಕಿ ರಾಮಾಯಣ, ಉತ್ತರ, ಸರ್ಗ ೨೨, ೨೩)

ಮನಸ್ಸಿನಲ್ಲಿ ಇಚ್ಛೆ ಮೂಡಿ ಅದರ ಉಚ್ಚಾರಣೆಯಾಗದಿದ್ದರೆ, ಅದು ಶಾಪ ಅಥವಾ ವರವಾಗುವುದಿಲ್ಲ. ನಂತರದ ಪರಿಣಾಮವನ್ನು ಲಕ್ಷ್ಯಿಸಿ ಕೆಲವು ಸಲ ಶಬ್ದೋಚ್ಚಾರವನ್ನು ತಡೆಹಿಡಿದಿದ್ದಾಗಿದೆ. ರಾಮಾಯಣದಲ್ಲಿ ಬಂದ ಇಂಥ ಹೇರಳ ಉದಾಹರಣೆಗಳನ್ನು ಮುಂಚೆ ಚರ್ಚಿಸಲಾಗಿದೆ. ವೇದವತಿ ಮತ್ತು ಕುಶಕನ್ಯೆಯರು ಮನಸ್ಸಿನಲ್ಲಿ ಮೂಡಿದ್ದರೂ ರಾವಣ ಹಾಗೂ ವಾಯುವಿಗೆ ಶಾಪವನ್ನು ಕೊಡಲಿಲ್ಲ. ಈ ರೀತಿಯಾಗಿ ವರಗಳನ್ನು ತಡೆಹಿಡಿದ ದಾಖಲೆ ಬಂದಿಲ್ಲ.

ಕೇವಲ ಇಚ್ಛೆ ಹಾಗೂ ಉಚ್ಚಾರ ಶಾಪ-ವರಗಳನ್ನು ಕೊಡಲು ಸಾಕಾಗುವುದಿಲ್ಲ. ಇವನ್ನು ಕೊಡುವ ವ್ಯಕ್ತಿಗೆ ಅಂಥ ಯೋಗ್ಯತೆ-ಬಲ ಇರಬೇಕಾಗುತ್ತದೆ. ತಪಸ್ಸಿನಿಂದ ಅಥವಾ ಯಜ್ಞದಿಂದ ಈ ಬಲವನ್ನು ಪಡೆದುಕೊಳ್ಳಬಹುದು. ವಿಪರೀತ ಕೋಪದಿಂದಾಡಿದ ಶಬ್ದಗಳು ಶಾಪವಾಗಲಾರವು! ಉಚ್ಚಾರದಂತೆ ಪರಿಣಾಮವನ್ನುಂಟುಮಾಡುವ ಸಾಮರ್ಥ್ಯ ಅವುಗಳಲ್ಲಿರುವುದಿಲ್. ಈ ಬಗೆಯ ಉದ್ಗಾರಗಳಿಗೆ ಬಿರುನುಡಿಗಳೆಂದೆನ್ನಬಹುದು. "ಕಾಗೆಯ ಶಾಪಕ್ಕೆ ಹಸು ಸಾಯುವುದೇ!” ಎಂಬ ಗಾದೆಯಿದೆ; ಅದಕ್ಕೆ ಕಾರಣವೆಂದರೆ ಯೋಗ್ಯತೆಯ ಅಭಾವ. ಸಂತುಷ್ಟನಾಗಿ ಯಾರೊಬ್ಬರು "ಒಳ್ಳೆಯದಾಗಲಿ!” ಎಂದರೆ ಅದು ವರವಾಗದು! ಅದು ಕೇವಲ ಸದಿಚ್ಛೆ-ಆಶೀರ್ವಾದ ಮಾತ್ರ. ಇಂಥ ಆಶೀರ್ವಾದಗಳು ಅಥವಾ ಕಟುಮಾತು ಶಬ್ದಗಳ ಉಚ್ಚಾರಣೆಯಂತೆ ನಡೆಯುವ ವೆಂತಲ್ಲ; ಅಪ್ಪಿತಪ್ಪಿ ನಡೆದರೆ ಅದಕ್ಕೆ ಕಾಕತಾಲೀಯ ನ್ಯಾಯವೆಂದೆನ್ನಬಹುದು. ನಿಜವಾದ ಶಾಪ-ವರಗಳ ಆಗುಗಳನ್ನು ತಡೆಯುವುದು ಸಾಧ್ಯವಿಲ್ಲ. ಸಂತಪ್ತನಾದ ಗೌತಮನು ಇಂದ್ರನನ್ನು ಉದ್ದೇಶಿಸಿ ನುಡಿದದ್ದು, ಶಾಪ; ವಿಶ್ವಾಮಿತ್ರನು ರಂಭೆಯನ್ನು ಕುರಿತು ಅಡಿದ್ದು ಶಾಪವಾಗಿದೆ. ಅವರ ಉದ್ಗಾರಗಳಿಗೆ ತಪಶ್ಚರ್ಯೆಯ ಬಲವಿತ್ತು. 'ಅಷ್ಟಪುತ್ರಸೌಭಾಗ್ಯವತೀ ಭವ', 'ಆಯುಷ್ಮಾನ್‌ಭವ' ಎಂಬ ನುಡಿಗಳೆಂದರೆ ಸದಿಚ್ಛೆಗಳು; ವರಗಳಲ್ಲ. ಅವುಗಳ ಪರಿಣಾಮಗಳು ನಿಶ್ಚಿತವಿರುವುದಿಲ್ಲ. ಯೋಗ್ಯತೆ ಇದ್ದ ಭೃಗುವಿನ ವರದಿಂದ ಸಗರ ರಾಜನ ಪತ್ನಿಯಾದ ಸುಮತಿಗೆ ಅರವತ್ತು ಸಾವಿರ ಗಂಡುಮಕ್ಕಳಾದವು. ವಿವಾಹವಾಗದೇ ಅಥವಾ ಯಾರೊಬ್ಬರ ಪತ್ನಿಯಾಗದೇ ಪುತ್ರಪ್ರಾಪ್ತಿ ಹೊಂದುವ ಇಚ್ಛೆ 'ಸೋಮದಾ' ಎಂಬ ಗಂಧರ್ವಿಯದಾಗಿತ್ತು. 'ಚುಲಿ' ಎಂಬ ಋಷಿಯು ಅಧಿಕಾರಬಲದಿಂದ ಅದನ್ನು ಪೂರೈಸಿದನು.