ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೧೧


ಕ್ರೋಧಗೊಂಡ ದುರ್ವಾಸನು 'ನಿನ್ನ ಎಲ್ಲ ಐಶ್ವರ್ಯವೂ ನಷ್ಟವಾಗಲಿ!' ಎಂಬ
ಶಾಪವನ್ನು ಇಂದ್ರನಿಗೆ ಕೊಟ್ಟನು. ಇಂದ್ರನು ಉಃಶಾಪಕ್ಕಾಗಿ ಪ್ರಾರ್ಥಿಸಿದರೂ
ದುರ್ವಾಸನು ಕೊಡಲಿಲ್ಲ. ದುರ್ವಾಸನು ಅಂಬರಿಷನನ್ನು ಕಾರಣವಿಲ್ಲದೆ ಕಾಡಿದನು.
ಆಗ ವಿಷ್ಣುವಿನ ಸುದರ್ಶನ ಚಕ್ರವನ್ನು ಬಿಡುಗಡೆ ಹೊಂದಲು ದುರ್ವಾಸನು
ಅಂಬರೀಷನಿಗೆ ಶರಣುಹೋಗಬೇಕಾಯಿತು. ಪದ್ಮಪುರಾಣದಲ್ಲಿ ರಾಮನ
ಅಶ್ವಮೇಧಯಜ್ಞದಲ್ಲಿಯ ಕುದುರೆಯ ವೇಷದಲ್ಲಿ ದುರ್ವಾಸನಿಂದ ಶಾಪ ಪಡೆದ
ಒಬ್ಬ ಡಾಂಭಿಕ ಬ್ರಾಹ್ಮಣನಿದ್ದನೆಂದಿದೆ.
ದುರ್ವಾಸನು ಒಮ್ಮೆ ಒಂದು ಸಾವಿರ ವರ್ಷಗಳ ಕಾಲ ಉಪವಾಸವಿದ್ದನು.
ಉಪವಾಸವನ್ನು ಪೂರ್ತಿಗೊಳಿಸಲು ದುರ್ವಾಸನು ರಾಮನ ಬಳಿಗೆ ಹೋದನು.
ಆಗ 'ಶಾಲ'ನು ಏಕಾಂತದಲ್ಲಿ ರಾಮನ ಜೊತೆ ಮಾತನಾಡುತ್ತಿದ್ದನು. ರಾಮನ
ಆಜ್ಞೆಯ ಮೇರೆಗೆ 'ರಾಮನನ್ನು ತಕ್ಷಣ ಭೇಟಿಯಾಗುವದು ಸಾಧ್ಯವಿಲ್ಲ'ವೆಂದು
ಲಕ್ಷ್ಮಣನು ದುರ್ವಾಸನಿಗೆ ತಿಳಿಸಿದನು. ಆಗ ದುರ್ವಾಸನು, 'ನಿಮ್ಮೆಲ್ಲರನ್ನೂ
ಶಪಿಸುವೆ' ಎಂಬ ಬೆದರಿಕೆಯನ್ನು ಲಕ್ಷ್ಮಣನಿಗೆ ಹಾಕಿದನು. ಲಕ್ಷ್ಮಣನು
ದುರ್ವಾಸನಿಗೆ ರಾಮನ ಭೇಟಿ ಮಾಡಿಸಿದನು. ರಾಮನು ಅವನು ಇಚ್ಛೆಪಟ್ಟ
ಭೋಜನವನ್ನು ಕೊಟ್ಟು ತೃಪ್ತಗೊಳಿಸಿದನು. ದುರ್ವಾಸನು ಮುದ್ಗಲನ ಸತ್ವಪರೀಕ್ಷೆ
ಮಾಡಿ, 'ನೀನು ದೇಹಸಹಿತ ಸ್ವರ್ಗವನ್ನು ಸೇರುವೆ!' ಎಂಬ ವರವನ್ನು ಅವನಿಗೆ
ಕೊಟ್ಟನು. ದುರ್ವಾಸನು 'ಶ್ರೀಕೃಷ್ಣನಿಗೆ ವರವನ್ನು ಕೊಟ್ಟಂತೆ ರುಕ್ಮಿಣಿಗೆ
ಶಾಪವನ್ನು ಕೊಟ್ಟಿದ್ದಾನೆ' ಎಂಬ ಉಲ್ಲೇಖವು ಸ್ಕಂದಪುರಾಣದಲ್ಲಿದೆ.
ಈತನು ಶಿವರಾಧನೆಯಲ್ಲಿದ್ದುಕೊಂಡು ಬಹಳಷ್ಟು ತಪವನ್ನು ಆಚರಿಸಿದನು.
ಶಂಕರನು ಪ್ರಸನ್ನನಾಗುತ್ತಿಲ್ಲವೆಂದು ತೋರಿಬಂದಾಗ ದುರ್ವಾಸನು ಶಿವನನ್ನು
ಶಪಿಸಲು ಹವಣಿಸಿದನು. ಓರ್ವ ಋಷಿಪುತ್ರಿಯಾದ ಕಂದಲಿ ಈತನ ಪತ್ನಿ.
ಕ್ರೋಧಾವೇಶದಲ್ಲಿ ಈತನು ತನ್ನ ಪತ್ನಿಯನ್ನೇ ಶಪಿಸಿ ಅವಳನ್ನು ಸುಟ್ಟು ಬೂದಿ
ಮಾಡಿದನು.
ದುರ್ವಾಸನು ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಈತನು ಕುಂತಿಗೆ
'ದೇವಹೂತಿ' ಎಂಬ ವಿದ್ಯೆಯನ್ನು ಕೊಟ್ಟಿದ್ದನು. ಈ ವಿದ್ಯೆಯಿಂದ ಕುಂತಿಯು
ಇಂದ್ರ, ವರುಣ, ಯಮ, ಅಶ್ವಿನೀಕುಮಾರ ಮತ್ತು ಸೂರ್ಯ ಇವರಿಂದ
ಮಕ್ಕಳನ್ನು ಪಡೆಯುವಂತಾದಳು. ಕೆಲವರ ಅಭಿಪ್ರಾಯದಂತೆ ದುರ್ವಾಸನು
ಪಾಂಡವರ ಪಿತ.