ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ದಿವ್ಯದೃಷ್ಟಿಯಿಂದ ಎಲ್ಲವನ್ನೂ ಅರಿತುಕೊಂಡು, ನಹುಷನನ್ನು ರಕ್ಷಿಸಿದನು. ವಸಿಷ್ಠನು
ಈತನ ಉಪನಯನ ವಿಧಿಯನ್ನು ಪೂರ್ತಿಮಾಡಿ, ವೇದಗಳನ್ನೂ
ಧನುರ್ವಿದ್ಯೆಯನ್ನೂ ಹೇಳಿಕೊಟ್ಟನು. ಈತನು ಬೆಸ್ತರ ಬಲೆಯಲ್ಲಿ ಸಿಲುಕಿಕೊಂಡ
ಚ್ಯವನಮುನಿಯ ಬಿಡುಗಡೆ ಮಾಡಿದನು. ಬೆಸ್ತರಿಗೆ ಗೋವುಗಳನ್ನು ಕೊಟ್ಟನು.
ತ್ವಷ್ಟನನ್ನು ಸನ್ಮಾನಿಸಲು ಗೋವಧೆಯನ್ನು ಮಾಡಿದನು. ಬ್ರಹ್ಮಹತ್ಯೆಯ ಪಾತಕವು
ನಡೆದ ಕಾರಣ ಇಂದ್ರನ ಇಂದ್ರಪದವು ಕಳೆದುಹೋಗಿತ್ತು. ಆಗ ದೇವತೆಗಳು
ಮತ್ತು ಋಷಿಗಳೆಲ್ಲರೂ ಸೇರಿ ತಮ್ಮ ತಪಸ್ಸಾಮರ್ಥ್ಯವನ್ನು ನಹುಷನಿಗೆ ಕೊಟ್ಟು
ಆತನಿಗೆ ಇಂದ್ರಪದವನ್ನು ಕೊಟ್ಟರು ಮತ್ತು 'ನೀನು ಯಾರನ್ನು ದೃಷ್ಟಿಸುವೆಯೋ
ಅವರ ತೇಜಹರಣವಾಗುವದು' ಎಂಬ ವರವನ್ನು ಕೊಟ್ಟರು. ಕೆಲವು ಕಾಲದವರೆಗೆ
ಇವನು ಧರ್ಮದಿಂದ ರಾಜ್ಯವನ್ನಾಳಿದನು. ಆದರೆ ಬರಬರುತ್ತ ಈತನಿಗೆ
ಅಹಂಕಾರವು ಹೆಚ್ಚಾಗಿ, ಬುದ್ದಿಯೂ ಕೆಟ್ಟು, ವಿಷಯಲಂಪಟನಾದನು. ಒಮ್ಮೆ
ಇಂದ್ರಾಣಿಯು ಈತನ ಕಣ್ಣಿಗೆ ಬಿದ್ದಳು. ಇವನು ಅವಳ ಸೌಂದರ್ಯವನನು
ಕಂಡು ಕಾಮಾಸಕ್ತನಾದನು. ಆಕೆಯನ್ನು ತನ್ನ ಬಳಿ ಕರೆತರಲು ದೇವತೆಗಳಿಗೆ
ಹೇಳಿದನು. ಆಗ ಇಂದ್ರಾಣಿಯು ಇಂದ್ರನೊಡನೆ ವಿಚಾರವಿನಿಮಯ ನಡೆಸಿದಳು.
ನಂತರ 'ಸಪ್ತರ್ಷಿಗಳು ಹೊತ್ತುತಂದ ಪಲ್ಲಕ್ಕಿಯಲ್ಲಿ ಕುಳಿತು ಬಂದರೆ ಸ್ವಾಗತಿಸುವೆ'
ಎಂದು ಇಂದ್ರಾಣಿಯು ನಹುಷನಿಗೆ ಹೇಳಿಕಳುಹಿದಳು. ನಹುಷನಿಗೆ ಇದು
ಬಹುಸುಲಭವಾದ ಸಂಗತಿ ಎನಿಸಿತು. ನಹುಷನು ಸಪ್ತರ್ಷಿಗಳು ಹೊತ್ತು ತಂದ
ಪಲ್ಲಕ್ಕಿಯಲ್ಲಿ ಕುಳಿತು ಇಂದ್ರಾಣಿಯತ್ತ ನಡೆದನು. ಪಲ್ಲಕ್ಕಿಯಲ್ಲಿ ಕುಳಿತ ನಹುಷನ
ಪಾದವು, ಪಲ್ಲಕ್ಕಿಯನ್ನು ಹೊತ್ತ ಅಗಸ್ತ್ಯ ಋಷಿಯ ತಲೆಗೆ ತಗುಲಿತು. ಆಗ
ಅಗಸ್ತ್ಯನು ನಹುಷನಿಗೆ ಶಾಪವನ್ನು ಕೊಟ್ಟ ಕಾರಣ ನಹುಷನು ಸರ್ಪವಾಗಿ
ಬಿದ್ದನು. ಈ ನಹುಷನು ಅಗಸ್ತ್ಯನತ್ತ ದೃಷ್ಟಿಸಿ ಆತನ ತೇಜಹರಣವನ್ನು ಮಾಡಿದ್ದರೂ
ಅಗಸ್ತ್ಯರ ಪ್ರಭಾವವು ಕಡಿಮೆಯಾಗಿರಲಿಲ್ಲ. ಏಕೆಂದರೆ ಅಗಸ್ತ್ಯನ ಜಟೆಯಲ್ಲಿ
ಭೃಗುವು ಕುಳಿತಿದ್ದನು. ನಹುಷನು ಅವನನ್ನು ಗಮನಿಸಿರಲಿಲ್ಲ. ಆದ್ದರಿಂದಲೇ
ಅವನಿಗೆ ಶಾಪವು ತಗುಲಿತು. ಯುಧಿಷ್ಠಿರನು ನಹುಷನನ್ನು ಈ ಶಾಪದಿಂದ
ಮುಕ್ತಗೊಳಿಸಿದನು.
ಈತನ ಮಕ್ಕಳ ಬಗ್ಗೆ ಬೇರೆಬೇರೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಯತಿ,
ಯಯಾತಿ, ಸಂಯಾತಿ ಮತ್ತು ಅಯಾತಿ ಎಂಬ ಹೆಸರುಗಳ ಉಲ್ಲೇಖವು
ಅನೇಕ ಗ್ರಂಥಗಳಲ್ಲಿದೆ.