ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೧೭


೬೬. ನಿಮಿರಾಜ

ಅಯೋಧ್ಯಾಪತಿಯಾದ ಇಕ್ಷ್ವಾಕುವಿನ ಹನ್ನೆರಡನೆಯ ಪುತ್ರ ನಿಮಿರಾಜ.
ಈತನು ಸ್ತ್ರೀಯರೊಡನೆ ದ್ಯೂತನಾಡುತ್ತಿದ್ದ ವೇಳೆಗೆ ವಸಿಷ್ಠನು ಅಲ್ಲಿಗೆ ಬಂದನು.
ರಾಜನು ವಸಿಷ್ಠನಿಗೆ ಯೋಗ್ಯವಾದ ಆಸನ, ಅತಿಥಿಸತ್ಕಾರ ನೀಡದೇ ಇದ್ದ
ಕಾರಣ ವಸಿಷ್ಠನು ಕೋಪಗೊಂಡು ನಿಮಿರಾಜನಿಗೆ ಶಾಪಕೊಟ್ಟನು. ನಿಮಿರಾಜನು
ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನೆಂದು ಪದ್ಮಪುರಾಣದಲ್ಲಿ ಬರೆದಿದೆ. ವಸಿಷ್ಠನ
ಶಾಪದಿಂದ ಚೈತನ್ಯಹೀನವಾಗಿದ್ದ ನಿಮಿರಾಜನ ದೇಹವನ್ನು ಸುಗಂಧದ್ರವ್ಯಗಳನ್ನು
ಬಳಸಿ ರಕ್ಷಿಸಿಡಲಾಗಿತ್ತು. ನಿಮಿರಾಜನ ಯಜ್ಞಕ್ಕೆಂದು ಬಂದ ಋಷಿಗಳು
ಯಜ್ಞವನ್ನು ಮುಂದುವರಿಸಿದರು. ಕೊನೆಗೆ ಹವಿರ್ಭಾಗವನ್ನು ಒಯ್ಯಲು ಬಂದ
ದೇವತೆಗಳು ಯಜಮಾನನನ್ನು ಆಶೀರ್ವದಿಸಬೇಕೆಂದು ವಿನಂತಿಸಲಾಯಿತು.
'ದೇಹ ಮತ್ತು ಜೀವ- ಇವುಗಳ ವಿಯೋಗವೆಂದರೆ ಬಲು ದುಃಖಕರ ಸಂಗತಿ.
ಆದ್ದರಿಂದ ನಾನು ದೇಹವನ್ನು ಧರಿಸದೆಯೇ ಎಲ್ಲರ ನೇತ್ರಗಳಲ್ಲಿರುವದನ್ನು
ಇಚ್ಛಿಸುತ್ತೇನೆ' ಎಂದು ನಿಮಿರಾಜನು ತಿಳಿಸಿದನು. ನಿಮಿರಾಜನು ಈ ರೀತಿ
ಬಯಸಿದ್ದರಿಂದ, ದೇವತೆಗಳು ಈತನನ್ನು ಎಲ್ಲ ಪ್ರಾಣಿಗಳ ನೇತ್ರಗಳಲ್ಲಿಯ
ಹೊಳಪಾಗಿ ಸ್ಥಾಪಿಸಿದರು. ಇದರಿಂದ ಪ್ರಾಣಿಗಳು ಕಣ್ಣುರೆಪ್ಪೆಗಳನ್ನು ತೆರೆಯುವದು-
ಮುಚ್ಚುವದನ್ನು ಮಾಡುತ್ತವೆಂದು ಕೆಲವು ಗ್ರಂಥಗಳಲ್ಲಿದೆ. ಕಣ್ಣಿವೆಗಳನ್ನು ಮುಚ್ಚಿ
ಮತ್ತೆ ತೆರೆಯುವಷ್ಟು ಅಲ್ಪಕಾಲಕ್ಕೆ 'ನಿಮಿಷ' ಎಂದು ಈತನಿಂದಲೇ ಬಂದಿದೆ.
ಬ್ರಹ್ಮದೇವನು ನಿಮಿರಾಜನಿಗೆ ಕಣ್ಣಿನ ರೆಪ್ಪೆಗಳ ಮೇಲಿರಲು ಹೇಳಿದನೆಂದು
ಮತ್ಸ್ಯಪುರಾಣದಲ್ಲಿದೆ. ನಿಮಿರಾಜನಿಗೆ ಸಂತಾನವಿರಲಿಲ್ಲವಾದ್ದರಿಂದ ಈತನು
ತನ್ನ ದೇಹವನ್ನು 'ಅರಣಿ' (ಬೆಂಕಿಯನ್ನು ಹುಟ್ಟಿಸುವ) ಯಂತೆ ಉಜ್ಜಿ ಮಂತ್ರ
ಸಹಿತವಾಗಿ ಹೋಮ ಮಾಡಿ ಮಂಥನ ಮಾಡಲು ಕೊಟ್ಟನು. ಇದರಿಂದ
ಉತ್ಪನ್ನವಾದ ತೇಜಸ್ಸುಳ್ಳ ಪುರುಷನೆಂದರೆ 'ಮಿಥಿ' ಎಂದಿದೆ. ಈ ರೀತಿ ಮಿಥಿಯು
ಮಾತೆಯಿಂದ ಜನ್ಮತಾಳದೆ ಪಿತನಿಂದ ಜನ್ಮ ತಾಳಿದನು. ಆದ್ದರಿಂದ ಮಿಥಿಗೆ
'ನಿಮಿಜನಕ' ಎಂದು ಕೂಡ ಎನ್ನುತ್ತಾರೆ; ಅಲ್ಲದೆ ದೇಹರಹಿತ ನಿಮಿರಾಜನಿಂದ
ಹುಟ್ಟಿದ ಕಾರಣ ಮಿಥಿಗೆ 'ವೈದೇಹ' ಎಂಬ ಹೆಸರು ಸಹ ಬಂದಿದೆ ಎಂದು
ವಾಲ್ಮೀಕಿಯು ಉತ್ತರಕಾಂಡ ಸರ್ಗ ೫೭ರಲ್ಲಿ ವಿವರಿಸಿದ್ದಾನೆ.
ಶಾಪ ಕ್ರಮಸಂಖ್ಯೆ ೫೦ ವಸಿಷ್ಠ < ನಿಮಿರಾಜ; ಶಾಪ ಕ್ರಮಸಂಖ್ಯೆ ೫೧
ನಿಮಿರಾಜ < ವಸಿಷ್ಠ; ಮತ್ತು ವರ ಕ್ರಮಸಂಖ್ಯೆ ೭೬ ದೇವ < ನಿಮಿರಾಜ
ಇವುಗಳನ್ನು (ಹೆಚ್ಚಿನ ವಿವರಗಳಿಗೆ) ನೋಡಿ.