ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೧೯


ನಿಷಾದರು ದೋಣಿಗಳಿಂದ ಸಾಗಾಣಿಕೆಯನ್ನು ಮಾಡುತ್ತಿದ್ದಿರಬಹುದು. ವನವಾಸಕ್ಕೆ
ಹೊರಟ ರಾಮನಿಗೆ ಗಂಗಾನದಿಯನ್ನು ದಾಟಲು ನೆರವಾದ ಗುಹಕನೂ ಒಬ್ಬ
ನಿಷಾದನೇ ಆಗಿದ್ದನು.
ಶಾಪ ಪಡೆದ ನಿಷಾದನ ಉಲ್ಲೇಖವು ವಾಲ್ಮೀಕಿ ರಾಮಾಯಣದಲ್ಲಿ 'ಮಾ
ನಿಷಾದ' ಎಂಬ ಬಾಲಕಾಂಡ ೨/೧೫ ಶ್ಲೋಕದನಂತರ ಎಲ್ಲಿಯೂ ಬಂದಿಲ್ಲ.
ಬೇಟೆಯು ನಿಷಾದರ ಬದುಕಿನ ಹಾದಿಯಾಗಿರುವುದರಿಂದ ಕ್ರೌಂಚಪಕ್ಷಿಯ
ವಧೆಯು ಅವರ ದೃಷ್ಟಿಯಿಂದ ಪಾಪಕರ್ಮವೆನಿಸಲಾರದು. ಹೀಗಿದ್ದರೂ ಆ
ಕ್ರೌಂಚಪಕ್ಷಿಯ ಜೋಡಿಯು ಮೈಥುನದಲ್ಲಿ ತೊಡಗಿದಾಗ ಬಾಣಬಿಡುವದು
ಸರಿಯಲ್ಲ, ಅದೊಂದು ಹೇಯ ಕೆಲಸವಾದ್ದರಿಂದ ನಿಷಾದನಿಗೆ ಶಾಪ
ದೊರೆಯಿತು.
ಶಾಪ ಕ್ರಮಸಂಖ್ಯೆ ೧ ವಾಲ್ಮೀಕಿ < ನಿಷಾದ- ಟಿಪ್ಪಣಿಯನ್ನು ನೋಡಿ.

೭೦. ನೀಲ

ನೀಲನು ಅಗ್ನಿಯಿಂದ ಜನಿಸಿದ ಒಬ್ಬ ವಾನರಪ್ರಮುಖ. ಇವನು
ತೀಕ್ಷ್ಣ ಬುದ್ಧಿಯವನಿದ್ದು ಸತತವಾಗಿ ಕಾರ್ಯದಲ್ಲಿ ತೊಡಗಿರುತ್ತಿದ್ದನು. ಸುಗ್ರೀವನ
ವಿನಂತಿಯ ಮೇರೆಗೆ ಇವನು ಹತ್ತುಕೋಟಿ ವಾನರರ ಸೈನ್ಯ ಸಹಿತ ಬಂದನು.
ಈತನು ವಾನರಸೇನೆಯ ಸೇನಾಧಿಪತಿಯಾಗಿದ್ದನು. ಸಮುದ್ರವನ್ನು ವ್ಯವಸ್ಥಿತವಾಗಿ
ದಾಟಿಸಿ, ಇಡೀ ವಾನರಸೈನ್ಯವನ್ನು ಇವನು ಲಂಕೆಯತ್ತ ಸಾಗಿಸಿದನು. ರಾಮನ
ಆಜ್ಞೆಯಂತೆ ಪ್ರಹಸ್ತನನ್ನು ಎದುರಿಸಲು ಇವನು ಲಂಕೆಯ ಪೂರ್ವದ ದ್ವಾರದಲ್ಲಿ
ಅನೇಕ ವಾನರರೊಂದಿಗೆ ಕಾಯ್ದುಕೊಂಡಿದ್ದನು. ನಿಕುಂಭನು ತೀಕ್ಷ್ಣಶರಗಳಿಂದ
ಯುದ್ಧದಲ್ಲಿ ಇವನನ್ನು ಗಾಯಗೊಳಿಸಿದನು. ಆಗ ಇವನು ನಿಕುಂಭನ ಸಾರಥಿಯ
ಶಿರವನ್ನು ಕತ್ತರಿಸಿ ಭೂಮಿಗೆ ಕೆಡವಿದನು. ಇಂದ್ರಜಿತುವನ್ನು ಹುಡುಕುತ್ತಿದ್ದಾಗ,
ಅವನ ಬಾಣಗಳಿಂದ ನೀಲನು ಕೆಳಗೆ ಉರುಳಿದನು. ಪ್ರಹಸ್ತನ ಜೊತೆ
ಯುದ್ಧಮಾಡಿ ಅವನನ್ನು ಯಮಸದನಕ್ಕೆ ಅಟ್ಟಿದನು. ಇದರಿಂದ ರಾಮನಿಗೆ
ಪರಮಾನಂದವಾಯಿತು. ಅಗ್ನಿಯ ಅಸ್ತ್ರವನ್ನು ಪ್ರಯೋಗಿಸಿ ರಾವಣನು ನೀಲನನ್ನು
ಕೆಳಗೆ ಉರುಳಿಸಿದರೂ ಅವನು ಸಾಯಲಿಲ್ಲ. ಸೇನೆಯ ವ್ಯೂಹವನ್ನು ಉತ್ಕೃಷ್ಟವಾಗಿ
ರಚಿಸಿ ನೀಲನು ಕುಂಭಕರ್ಣನ ಮೇಲೆ ಪರ್ವತಶಿಖರವನ್ನು ಎಸೆದನು.
ಕುಂಭಕರ್ಣನು ಈತನಿಗೆ ಮೊಣಕಾಲಿನಿಂದ ತಿವಿದು ಒದ್ದನು. ರಾಕ್ಷಸರಿಂದ
ಸುತ್ತುಗಟ್ಟಲ್ಪಟ್ಟ ಅಂಗದನ ಸಹಾಯಕ್ಕೆ ಈ ನೀಲನು ಮುಂದಾದನು.