ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮಹೋದರನೊಡನೆ ಯುದ್ಧಮಾಡಿ ಆತನನ್ನು ಕೊಂದುಹಾಕಿದನು. ಅತಿಕಾಯನು
ಮಾತ್ರ ಇವನನ್ನು ಸೋಲಿಸಲು ಸಾಧ್ಯವಾಯಿತು. ಯುದ್ಧಸಮಾಪ್ತಿಯಾದನಂತರ
ರಾಮನು ನೀಲನನ್ನು ಸತ್ಕರಿಸಿದನು. ರಾಮನ ಅಶ್ವಮೇಧಯಜ್ಞದ ಸಮಯದಲ್ಲಿ
ಅಶ್ವರಕ್ಷಣೆಗಾಗಿ ನೀಲನೂ ಸಹ ಶತ್ರುಘ್ನನೊಡನೆ ಇದ್ದನು.

೭೧. ನೃಗ

ಒಂದು ಕೋಟಿ ಸಂಖ್ಯೆಯಲ್ಲಿ ಕರುಗಳೊಂದಿಗಿದ್ದ ಗೋವುಗಳನ್ನು ನೃಗನು
ಪುಷ್ಕರ ತೀರ್ಥದಲ್ಲಿ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಒಬ್ಬ ಅಹಿತಾಗ್ನಿ
ಬ್ರಾಹ್ಮಣನ ಹಸುವು, ಹೀಗೆ ದಾನಕೊಟ್ಟ ಹಸುಗಳ ಹಿಂಡಿನೊಡನೆ ಕಣ್ಣುತಪ್ಪಿ
ಹೋಗಿಬಿಟ್ಟಿತು. ಆ ಬ್ರಾಹ್ಮಣನು ಕಳೆದುಹೋದ ತನ್ನ ಹಸುವಿಗಾಗಿ ತುಂಬ
ಹುಡುಕಾಡಿದನು. ಆಗ ಅದು ಇನ್ನೊಬ್ಬ ಬ್ರಾಹ್ಮಣನ ಬಳಿ ಇರುವದು
ಕಂಡುಬಂದಿತು. ಈ ಇಬ್ಬರು ಬ್ರಾಹ್ಮಣರಲ್ಲಿ ಹಸುವಿಗಾಗಿ ವ್ಯಾಜ್ಯವುಂಟಾಯಿತು.
ನ್ಯಾಯವನ್ನು ಪಡೆಯಲು ಇವರಿಬ್ಬರೂ ನೃಗರಾಜನ ಅರಮನೆಯ ಬಾಗಿಲಿಗೆ
ಹೋದರು. ಇವರಿಬ್ಬರೂ ಅಲ್ಲಿ ಅನೇಕ ದಿನಗಳವರೆಗೆ ಕಾಯ್ದುಕೊಂಡಿದ್ದರೂ
ನೃಗರಾಜನು ವ್ಯಾಜ್ಯದ ಇತ್ಯರ್ಥ ಮಾಡಲಿಲ್ಲ. ಆಗ ಕೋಪಗೊಂಡ ಇಬ್ಬರೂ
ಬ್ರಾಹ್ಮಣರು 'ನೀನು ಓತಿಕೇತನಾಗು!' ಎಂದು ನೃಗರಾಜನಿಗೆ ಶಪಿಸಿದರು.
'ಕಲಿಯುಗದಲ್ಲಿ ಶಾಪಮುಕ್ತನಾಗುವೆ!' ಎಂಬ ಉಃಶಾಪವನ್ನು ಕೊಟ್ಟರು. ಆಗ
ನೃಗರಾಜನು 'ವಸು' ಎಂಬ ತನ್ನ ಪುತ್ರನಿಗೆ ರಾಜ್ಯಾಭಿಷೇಕ ಮಾಡಿ, ತಾನು
ಒಂದು ಬಿಲದಲ್ಲಿ ಸೇರಿಕೊಂಡು ಶಾಪವನ್ನು ಅನುಭವಿಸತೊಡಗಿದನು.
ನೃಗರಾಜನು ಉಃಶಾಪವನ್ನು ಪ್ರಾರ್ಥಿಸಿದಾಗ 'ಶ್ರೀಕೃಷ್ಣನಿಂದ ನಿನ್ನ ಉದ್ಧಾರ
ವಾಗುವದು!' ಎಂಬ ಉಃಶಾಪವು ದೊರೆಯಿತೆಂಬ ಉಲ್ಲೇಖವು ಕೆಲವೆಡೆಯಲ್ಲಿದೆ.

೭೨. ಪರ್ವತ

ಇವನು ಒಬ್ಬ ದೇವರ್ಷಿಯಾಗಿದ್ದನು. 'ಮಾಂಧಾತ ಎಂಬ ರಾಜನು ನಿನ್ನ
ಯುದ್ಧದ ತೀಟೆಯನ್ನು ಇಂಗಿಸುವನು!' ಎಂದು ಇವನು ರಾವಣನಿಗೆ ಹೇಳಿದ್ದನು.

೭೩. ಪುಂಜಿಕಸ್ಥಲೆ

ಇವಳೋರ್ವ ಶ್ರೇಷ್ಠ ಅಪ್ಸರೆ. ಇವಳು ಲಾವಣ್ಯಸಂಪನ್ನೆಯಾಗಿದ್ದಳು.
ಒಬ್ಬ ಅನಾಮಿಕ ಋಷಿಯ ಶಾಪದಿಂದ ಇವಳಿಗೆ ಕೋತಿಯ ಜನ್ಮವು ಬಂದಿತು.