ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೨೯


'ಸತಿ'ಯನ್ನು ನಿರ್ಮಿಸಿ, ನಂತರ ದಕ್ಷನಿಂದ ರುದ್ರನನ್ನು ಅವಮಾನಗೊಳಿಸಿದನು.
ಬ್ರಹ್ಮದೇವನು ವರ ನೀಡುವದರಲ್ಲಿ ಅತ್ಯಂತ ಉದಾರಿಯಾಗಿದ್ದನು. ವಾಲ್ಮೀಕಿ
ರಾಮಾಯಣದ ಪ್ರಕಾರ ಇವನು ಇಪ್ಪತ್ತು ವರಗಳನ್ನು ಕೊಟ್ಟಿರುವನೆಂದು
ಕಂಡುಬರುತ್ತದೆ. ಬ್ರಹ್ಮದೇವನು ಕೊಟ್ಟ ವರದ ಕಾರಣದಿಂದಲೇ ವಾಲ್ಮೀಕಿಯು
ರಾಮಾಯಣವನ್ನು ಬರೆಯಲು ಪ್ರವೃತ್ತನಾದನು. ಒಂದು ಸಾವಿರ ವರ್ಷಗಳ
ತಪಸ್ಸನ್ನು ಮಾಡಿದನೆಂದು ವಿಶ್ವಾಮಿತ್ರನಿಗೆ ಬ್ರಹ್ಮನು ಮೊದಲು ರಾಜರ್ಷಿ ಎಂದೂ
ನಂತರದ ವಿಶ್ವಾಮಿತ್ರನ ಪ್ರತಿ ಸಾವಿರ ವರ್ಷಗಳ ತಪಸ್ಸು ಪೂರ್ಣಗೊಂಡಾಗ
ಅವನಿಗೆ ಋಷಿ, ಮಹರ್ಷಿ ಮತ್ತು ಬ್ರಹ್ಮರ್ಷಿ ಎಂಬ ಪದವಿಗಳನ್ನೂ ಕೊಟ್ಟನು.
ರಾವಣ, ಕುಂಭಕರ್ಣ, ಮೇಘನಾದ, ಮಾಲಿ, ಸುಮಾಲಿ, ಮೌಲ್ಯವಾನ, ಸುಕೇತು,
ತಾಟಕಾ, ವಿರಾಧ, ಮಾರೀಚ, ಮಯ, ನಿವಾತಕವಚ ಮೊದಲಾದ ಅನೇಕ
ರಾಕ್ಷಸರಿಗೆ ಈತನು ವರಗಳನ್ನು ಕೊಟ್ಟಿದ್ದಾನೆ. ಪಿತರಿಗೆ ಸ್ವರ್ಗವನ್ನು
ದೊರಕಿಸಿಕೊಡುವ ಕಾರ್ಯವು ಭಗೀರಥನಿಗೆ ಬ್ರಹ್ಮನಿಂದಲೇ ಸಾಧ್ಯವಾಯಿತು.
ದೇವತೆಗಳ ಕಾರ್ಯಕ್ಕಾಗಿ ಮುಂದೆ ಹನುಮಾನನ ಉಪಯೋಗವಾಗಲಿದೆ
ಎಂಬುದನ್ನು ಲಕ್ಷಿಸಿ ಬ್ರಹ್ಮದೇವನು ಹನುಮಾನನಿಗೆ ವರಗಳನ್ನು ಕೊಟ್ಟಿದ್ದನು.
ಅಷ್ಟೇ ಅಲ್ಲದೆ, ಬೇರೆ ದೇವತೆಗಳಿಂದಲೂ ಹನುಮಾನನಿಗೆ ವರ ಸಿಗುವಂತೆ
ಮಾಡಿದನು. ಕುಂಭಕರ್ಣನಿಗೆ ದೀರ್ಘನಿದ್ರೆಯ ವರವನ್ನೂ ಮತ್ತು ರಾವಣನಿಗೆ
ಮರ್ಯಾದಿತ ಸಂದರ್ಭದಲ್ಲಿ ಸಾವು ಇರದಂಥ ವರವನ್ನೂ ಕೊಟ್ಟನು.
ಮೇಘನಾದನು ಇಂದ್ರನನ್ನು ಸೋಲಿಸಿ ಆತನನ್ನು ಬಂಧಿಸಿ ತಂದಾಗ ಬ್ರಹ್ಮದೇವನು
ಇಂದ್ರನನ್ನು ಬಿಡಿಸಲು ಏನನ್ನು ಮಾಡಲೂ ಸಿದ್ಧನಾದನು. ಭೂಲೋಕದಲ್ಲಿ
ಯಾರಿಗೂ ಸಂಪೂರ್ಣವಾಗಿ ಅಮರತ್ವವು ಸಿಗಲಾರದು; ಆದ್ದರಿಂದ ಅದನ್ನು
ಹೊರತುಪಡಿಸಿ ಮೇಘನಾದನು ಬೇಡಿದ ಎಲ್ಲ ವರಗಳನ್ನೂ ಬ್ರಹ್ಮದೇವನು
ಕೊಟ್ಟನು. 'ಹೋಮವನ್ನು ಪೂರ್ತಿಗೊಳಿಸುವ ಮೊದಲು ನಿಕುಂಭಿಲೆಗೆ ಬಂದು,
ಯಾವ ಶಸ್ತ್ರಧಾರಿಯು ನಿನ್ನೊಡನೆ ಯುದ್ಧ ಮಾಡುವನೋ ಆತನಿಂದ ನಿನ್ನ
ವಧೆಯಾಗುವದು!” ಎಂಬ ಶಾಪಸಮವಾದ ವರವನ್ನು ಬ್ರಹ್ಮನು ಮೇಘನಾದನಿಗೆ
ಕೊಟ್ಟನು. ಮೈಂದ, ದ್ವಿವಿದ, ಈ ವಾನರರಿಗೂ ಬ್ರಹ್ಮನಿಂದ ವರಗಳು ದೊರೆತವು.
ವರಗಳನ್ನು ಕರುಣಿಸಿದಂತೆಯೇ ಬ್ರಹ್ಮನು ಶಾಪಗಳನ್ನೂ ಕೊಟ್ಟಿದ್ದಾನೆ. ಆದರೆ
ಈ ಶಾಪಗಳನ್ನು ಕೇವಲ ರಾವಣ ಮತ್ತು ಕುಂಭಕರ್ಣರಿಗೆ ಮಾತ್ರ ಕೊಟ್ಟಿದ್ದಾನೆ.
ವರದಿಂದ ಹೊಂದಿದ ಸಾಮರ್ಥ್ಯವನ್ನು, ಉನ್ಮತ್ತನಾದ ರಾವಣನು
ದುರುಪಯೋಗಿಸಿ ಪ್ರಜೆಗಳನ್ನು ಪೀಡಿಸಹತ್ತಿದನು. ಸ್ತ್ರೀಯರ ಮೇಲೆ ಬಲಾತ್ಕಾರ