ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಶಾಪ-ವರಗಳನ್ನು ಕೊಡುವಾಗಿನ ಉದ್ಗಾರಗಳೊಡನೆ ಕೆಲವು ಮಾಧ್ಯಮಗಳನ್ನು ಬಳಸುತ್ತಾರೆ. ಅವನ್ನು ಕೊಡುವ ವ್ಯಕ್ತಿ ಮತ್ತು ಪಡೆಯುವ ವ್ಯಕ್ತಿ ಇವರಲ್ಲಿಯ ಪರಸ್ಪರರ ಸ್ಪರ್ಶವು ಪರಿಣಾಮದ ದೃಷ್ಟಿಯಿಂದ ಅತಿ ಮಹತ್ವದ್ದಿದೆ. 'Physical contact is the most efficatious means of transmission.'ಸ್ಪರ್ಶದಲ್ಲಿ ವಾಹಕಶಕ್ತಿ ಅಧಿಕವಾಗಿರುತ್ತದೆ. ಆಶೀರ್ವದಿಸುವಾಗ ತಲೆಯ ಮೇಲೆ ಕೈ ಇಡುವುದು, ಬೆನ್ನ ಮೇಲೆ ಕೈ ಆಡಿಸುವುದು ಇವುಗಳ ರೂಢಿ ಇದೆ. ಇದಕ್ಕೆ ಪ್ರತಿಯಾಗಿ ಶಾಪವನ್ನು ಉಚ್ಚರಿಸುವಾಗ ಸಿಟ್ಟಿನಿಂದ ಹಸ್ತಗಳು ಮೇಲೆ ಹೋಗುತ್ತವೆ. ಸ್ಪರ್ಶವು ಒಂದು ಮಾಧ್ಯಮವಿದ್ದಂತೆ 'ನೀರು' ಕೂಡ ಒಂದು ಮಾಧ್ಯಮವಾಗಬಹುದು. ಸಾಯಣಾಚಾರ್ಯರ ಮತದಂತೆ ಋಗ್ವೇದದಲ್ಲಿಯ 'ಜಲ' ಎಂಬ ಶಬ್ದಕ್ಕೆ ಶಾಪವೆಂಬ ಅರ್ಥವಿದೆ. ದೇವತೆಗಳ ಅಭಿಷೇಕದ ನೀರು ಪವಿತ್ರ ತೀರ್ಥವಾಗುತ್ತದೆ. ನೀರಿನಿಂದ ಸೂರ್ಯೋಪಾಸನೆಯಲ್ಲಿ ಅರ್ಘ್ಯವನ್ನು ಕೊಡುತ್ತಾರೆ; ಅದೇ ನೀರನ್ನು ಶ್ರಾದ್ಧ ವಿಧಿಯಲ್ಲಿ ತರ್ಪಣಬಿಡುವಾಗ ಬಳಸುತ್ತಾರೆ. ಶಾಪವನ್ನು ಕೊಡುವಾಗ ಕೈಯಲ್ಲಿ ನೀರನ್ನು ಹಿಡಿದುಕೊಂಡಿರುತ್ತಾರೆ. ಸೌದಾಸರಾಜನು ವಸಿಷ್ಠನಿಗೆ ಪ್ರತಿಶಾಪವನ್ನು ಕೊಡುವಾಗ ಕೈಯಲ್ಲಿ ನೀರನ್ನು ಹಿಡಿದುಕೊಂಡಿದ್ದನು.


        ತತಃ ಕ್ರುದ್ಧಸ್ತು ಸೌದಾಸಸ್ತೋಯಂ ಜಗ‍್ರಾಹ ಪಾಣಿನಾ |
        ವಸಿಷ್ಠಂ ಶಪ್ತುಷೂರೇಭೇ ಭಾರ್ಯಾ ಚೈತನಮವಾರಯತ್ ‖
        ತತಃ ಕ್ರೋಧಮಯಂ ತೋಯಂ ತೇಜೋಬಲಸಮನ್ವಿತಮ್ |
        ವ್ಯಸರ್ಜಯತ ಧರ್ಮಾತ್ಮಾ ತತಃ ಪಾದೌ ಸಿಷೇಚ ಚ ‖

ಉತ್ತರ. ೬೫/೨೯-೩೧.

ಸೌದಾಸರಾಜನು ಸಿಟ್ಟಿನಿಂದ ವಸಿಷ್ಠನನ್ನು ಶಪಿಸಲೆಂದು ಕೈಯಲ್ಲಿ ನೀರನ್ನು ತೆಗೆದುಕೊಂಡನು; ಆತನ ಪತ್ನಿಯು ಅದನ್ನು ನಿಷೇಧಿಸಿದಳು. ಆ ಕೋಪಪೂರಿತ ತೇಜಬಲಗಳಿಂದ ಯುಕ್ತವಾದ ನೀರನ್ನು ಆ ಧರ್ಮಾತ್ಮನು ತನ್ನ ಪಾದಗಳ ಮೇಲೆ ಬಿಟ್ಟುಕೊಂಡನು. ಹೀಗಾಗಿ ಸೌದಾಸನು 'ಕಲ್ಮಾಷಪಾದ'ನಾದನು. ಕೆಲವೊಮ್ಮೆ ಶಾಪ ಪಡೆಯುವ ವ್ಯಕ್ತಿಯು ಹತ್ತಿರವಿರದಿದ್ದರೂ ಶಾಪವನ್ನು ಕೊಟ್ಟಿದ್ದಾರೆ. ಶ್ರಮಕಋಷಿಯ ಮಗನಾದ 'ಶೃಂಗಿ' ಋಷಿಯು ಪರೀಕ್ಷಿತನಿಗೆ “ಏಳು ದಿನಗಳಲ್ಲಿ

——————
೬. Encyclopaedia of Religion and Ethics, p. 369.