ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೩೭


ಈ ರೀತಿ ಮಾಡುವುದು ಸರಿಯಲ್ಲವೆಂದು ತಿಳಿಸಿ ಸೌದಾಸನನನ್ನು ಪರಾವೃತ್ತ
ಗೊಳಿಸಿದ್ದಳು. ಮದಯಂತಿಗೆ ಅಶ್ಮಕನೆಂಬ ಒಬ್ಬ ಮಗನಿದ್ದನು.

೯೦. ಮಧುಚ್ಛಂದ

ಇವನು ವಿಶ್ವಾಮಿತ್ರನ ಐವತ್ತೆರಡನೆಯ ಮಗ. ಮೊದಲಿನ ಐವತ್ತು ಮಕ್ಕಳು
ಶುನಃಶೇಪನನ್ನು ಅಣ್ಣನೆಂದು ಬಗೆಯಲು ಒಪ್ಪಿಕೊಳ್ಳಲಿಲ್ಲ. ಒಪ್ಪಿಕೊಂಡವರಲ್ಲಿ
ಮಧುಚ್ಛಂದನೇ ಪ್ರಮುಖನಿದ್ದನು. ವಿಶ್ವಾಮಿತ್ರನು ಇದರಿಂದ ಪ್ರಸನ್ನಗೊಂಡು
ಮಧುಚ್ಛಂದನಿಗೆ ಉತ್ತಮ ಆಶೀರ್ವಾದವನ್ನು ಕೊಟ್ಟನು. ಋಗ್ವೇದದ ಮೊದಲನೆಯ
ಮಂಡಲದಲ್ಲಿಯ ಮೊದಲಿನ ಹತ್ತು ಸೂಕ್ತಗಳನ್ನು ಮಧುಚ್ಛಂದನು ರಚಿಸಿದ್ದಾನೆ.
ಈತನು ಶರ್ಯಾತಿಯ ಪುರೋಹಿತನಾಗಿದ್ದನು.

೯೧. ಮಧುಧೈತ್ಯ

ಈತನು ಕೃತಯುಗದ ದಿತಿಯ ಮಗ. ರಾವಣನ ಚಿಕ್ಕಮ್ಮನ ಮಗಳ
ಹೆಸರು ಕುಂಭೀನಸಿ ಎಂದಿತ್ತು. ಮಧುದೈತ್ಯನು ಈಕೆಯನ್ನು ಅಪಹರಿಸಿದಾಗ
ಇವನ ಪಾರುಪತ್ಯ ಮಾಡಲು ರಾವಣನು ಸೈನ್ಯಸಮೇತನಾಗಿ ಸಜ್ಜಾದನು. ಆಗ
ಕುಂಭೀನಸಿಯು ಮಧುದೈತ್ಯನೇ ತನ್ನ ಪತಿ ಎಂದು ಹೇಳಿ ರಾವಣನಿಗೆ ಸಹಾಯ
ಮಾಡಲು ಹೇಳಿದಳು. ಮಧುದೈತ್ಯನು ಜ್ಞಾನಿಯೂ ಬುದ್ದಿನಿಷ್ಠನೂ ಆಗಿದ್ದನು;
ದೇವತೆಗಳೊಡನೆ ಮಿತ್ರತ್ವವನ್ನಿಟ್ಟುಕೊಂಡಿದ್ದನು. ಶಂಕರನಿಂದ ಇವನಿಗೆ ಒಂದು
ತ್ರಿಶೂಲವು ವರವಾಗಿ ದೊರೆತಿತ್ತು. ಈತನು ದೇವತೆ-ಬ್ರಾಹ್ಮಣರೊಡನೆ ವೈರತ್ವವನ್ನು
ತಾಳದೇ ಇರುವವರೆಗೆ ಮಾತ್ರ ಈ ಚಿರವಾಗಿರಬೇಕೆಂಬ ಇಚ್ಛೆಯು ಮಧು
ದೈತ್ಯನದಿತ್ತು. ಶಂಕರನ ಬಳಿ ಈ ಇಚ್ಛೆಯನ್ನು ಅವನು ವ್ಯಕ್ತಪಡಿಸಿದನು. 'ಈ
ಇಚ್ಛೆಯು ಪೂರ್ಣವಾಗಲಾರದು; ಕೇವಲ ಒಬ್ಬ ಪುತ್ರನಿಗೆ ಮಾತ್ರ ಅದು
ದೊರಕುವುದು; ಮತ್ತು ಈ ಶೂಲವು ಕೈಯಲ್ಲಿರುವವರೆಗೆ ಆ ಪುತ್ರನನ್ನು ಯಾರೂ
ವಧಿಸುವಂತಿಲ್ಲ!” ಎಂದು ಶಂಕರನು ಹೇಳಿದನು. ಮಧುದೈತ್ಯನ ಮಗನಾದ
ಲವಣನಿಗೆ ಈ ಶೂಲವು ವಾರಸಾಗಿ ದೊರೆಯಿತು.

೯೨. ಮಯ

ಇವನು ದನುವಿನ ಪುತ್ರರಾದ ದಾನವರಲ್ಲಿ ಒಬ್ಬನಿದ್ದನು. ರಾಮಾಯಣದಲ್ಲಿ
ಇವನನ್ನು ದಿತಿಯ ಪುತ್ರನೆಂದು ಉಲ್ಲೇಖಿಸಿದ್ದು ಸರಿಯಲ್ಲ. ಈತನಿಗೆ ನಮುಚಿ