ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ಪಾದುಕೆಗಳನ್ನು ಅಯೋಧ್ಯೆಗೆ ತಂದು ತಾನು ಸನ್ಯಾಸವೃತ್ತಿಯನ್ನು ತಳೆದು ರಾಮನ ಹೆಸರಿನಲ್ಲಿ ರಾಜ್ಯಭಾರವನ್ನು ನಡೆಯಿಸಿದನು. ರಾಮನು ವನವಾಸದಲ್ಲಿದ್ದಾಗ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಕಾಂಚನ ಮೃಗದ ಆಸೆಯನ್ನು ತೋರಿಸಿ ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದನು. ತನ್ನ ಪತ್ನಿಯಾಗು ಎಂದು ಸೀತೆಗೆ ಅನುನಯಿಸಿದನು; ಪೀಡಿಸಿದನು; ಆದರೆ ಸೀತೆ ರಾವಣನಿಗೆ ವಶಳಾಗಲಿಲ್ಲ. ರಾಮನು ಸೀತೆಯನ್ನು ಹುಡುಕಲು ಲಕ್ಷಣನೊಡನೆ ತುಂಬಾ ಕಷ್ಟಪಟ್ಟನು. ಸುಗ್ರೀವನೊಡನೆ ಸ್ನೇಹಬೆಳೆಸಿ ವಾಲಿಯನ್ನು ವಧಿಸಿದನು. ರಾಮನಿಗೆ ನಿಷ್ಠಾವಂತನಾದ ಹನುಮಾನನಂತಹ ಸುಹೃದ್ ಬಂಟನು ದೊರೆತನು. ವಿಭೀಷಣನನ್ನು ಆತ್ಮೀಯನನ್ನಾಗಿ ಮಾಡಿಕೊಂಡು ವಾನರರ ಬೆಂಬಲದಿಂದ ಲಂಕೆಯ ಮೇಲೆ ಏರಿ ಹೋದನು. ರಾವಣನನ್ನು ವಧಿಸಿ ಸೀತೆಯನ್ನು ಮುಕ್ತಗೊಳಿಸಿದನು. ಅಗ್ನಿದಿವ್ಯದ ಮೂಲಕ ಸೀತೆಯ ಶುದ್ಧತೆಯನ್ನು ಪ್ರಕಟಿಸಿ ಆಕೆಯನ್ನು ಸ್ವೀಕರಿಸಿದನು. ಲಂಕಾರಾಜ್ಯವನ್ನು ವಿಭೀಷಣನಿಗೆ ಕೊಟ್ಟು ಅಯೋಧ್ಯೆಗೆ ಮರಳಿದನು. ಭರತನು ರಕ್ಷಿಸಿಟ್ಟ ರಾಜ್ಯವನ್ನು ಸ್ವೀಕರಿಸಿದನು. ಲೋಕಾಪವಾದವನ್ನು ಕಳೆಯಲು, ಸೀತೆಯು ಆಗ ಗರ್ಭಿಣಿಯಿದ್ದರೂ ಅವಳನ್ನು ರಾಮನು ತ್ಯಜಿಸಿದನು. ವಾಲ್ಮೀಕಿ ಋಷಿಯ ಆಶ್ರಮದಲ್ಲಿ ಸೀತೆಯು ಲವ- ಕುಶರನ್ನು ಹೆತ್ತಳು. 'ರಾಮನ ಅವತಾರಕಾರ್ಯ ಮುಗಿದಿದೆ' ಎಂಬ ಸೂಚನೆಯನ್ನು ಕಾಲನು ಕೊಟ್ಟನಂತರ ರಾಮನು ಮಹಾಪ್ರಸ್ಥಾನಕ್ಕೆ ತೆರಳಿದನು. ರಾಮನು ಸತ್ಯವಚನಿ, ಪಿತನ ಆಜ್ಞೆಯನ್ನು ಪಾಲಿಸಲು ರಾಜ್ಯಾಧಿಕಾರವನ್ನು ತ್ಯಜಿಸಿ, ಆನಂದದಿಂದ ವನವಾಸವನ್ನು ಸ್ವೀಕರಿಸಿದನು. ಸೀತೆಯ ಮೇಲೆ ಇವನಿಗೆ ಅಪಾರ ಪ್ರೀತಿಯಿತ್ತು. ಅವಳ ಚಾರಿತ್ರವು ಶುದ್ಧವಿದೆ ಎಂದು ಗೊತ್ತಿದ್ದರೂ ಅವಳಿಂದ ಅಗ್ನಿದಿವ್ಯ ಮಾಡಿಸಿ ನಂತರ ಅವಳನ್ನು ಸ್ವೀಕರಿಸಿದನು. ರಾಜನ ಚಾರಿತ್ರ್ಯವು ಕಲಂಕರಹಿತವಾಗಿರಬೇಕೆಂದು, ಲೋಕಾಪವಾದವನ್ನು ಗಮನಿಸಿ, ಸೀತೆಯನ್ನು ತ್ಯಜಿಸಿದನು. ರಾಮನು ಏಕಪವ್ರತವನ್ನು ಬಲು ಕಟ್ಟುನಿಟ್ಟಿನ ನಿಷ್ಠೆಯಿಂದ ಪಾಲಿಸಿ ಸಮಾಜಕ್ಕೆ ಒಂದು ಆದರ್ಶವನ್ನು ಕಲ್ಪಿಸಿದನು. ದುಷ್ಟರನ್ನು ದಂಡಿಸುವಾಗ ಸಜ್ಜನರ ರಕ್ಷಣೆಯ ಹೊಣೆಯನ್ನು ಅಂಗೀಕರಿಸಿದನು. - ರಾಮನು ಕರ್ತವ್ಯದಕ್ಷನಿದ್ದಷ್ಟೇ ಕರ್ತವ್ಯಕಠೋರನಾಗಿದ್ದನು. ಲಕ್ಷ್ಮಣನ ಮೇಲೆ ಇವನಿಗೆ ಬಲು ಪ್ರೀತಿ. ಲಕ್ಷ್ಮಣನನ್ನು ಬಿಟ್ಟು ರಾಮನು ಒಂದು ಕ್ಷಣವೂ ಇರುತ್ತಿರಲಿಲ್ಲ. ಬಹಳ ಹೊಣೆಗಾರಿಕೆಯ ಹಾಗೂ ಕಠಿಣ ಕಾರ್ಯಗಳನ್ನು ಲಕ್ಷ್ಮಣನಿಗೆ ಒಪ್ಪಿಸುತ್ತಿದ್ದನು. ಕಾಲನೊಡನೆ ರಾಮನು ಏಕಾಂತದಲ್ಲಿ ಮಾತಿನಲ್ಲಿದ್ದಾಗ