ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ವಧೆಯಾಗಲಾಗದು!” ಎಂಬ ವರ ಕೊಟ್ಟನು. ಪದಪುರಾಣದಲ್ಲಿ ಈ ವರವನ್ನು ಶಂಕರನು ಕೊಟ್ಟನೆಂದಿದೆ. ಬ್ರಹ್ಮದೇವನು ಇನ್ನೊಂದು ವರವನ್ನು ರಾವಣನಿಗೆ ಕೊಟ್ಟು ಹವನಮಾಡಿದ ಎಲ್ಲ ಶಿರಗಳನ್ನು ರಾವಣನಿಗೆ ಮರಳಿಸಿದನು. ಅಂದಿನಿಂದ ರಾವಣನು ಪುನಃ ದಶಾನನ ಅಥವಾ ದಶಗ್ರೀವನಾದನು. ಕುಬೇರನಿಂದ ಲಂಕೆಯನ್ನು ದೋಚಿಕೊಂಡು ರಾವಣನು ಸ್ವತಃ ಲಂಕಾಧೀಶನಾದನು. ಮಯನ ಮಗಳಾದ ಮಂಡೋದರಿ ಈತನ ಪತ್ನಿ, ಇವಳಲ್ಲದೆ ರಾವಣನಿಗೆ ಒಂದು ಸಾವಿರ ಸ್ತ್ರೀಯರಿದ್ದರು. ಮಂಡೋದರಿಯ ಮಗನೇ ಮೇಘನಾದ, ಅತಿಕಾಯ, ತ್ರಿಶಿರ, ನರಾಂತಕ, ದೇವಾಂತಕರೆಂಬ ಇನ್ನೂ ಅನೇಕ ಗಂಡುಮಕ್ಕಳು ಇವನಿಗೆ ಇದ್ದರು. ಕುಂಭಕರ್ಣ, ವಿಭೀಷಣರು ಈತನ ಸಹೋದರರು, ಶೂರ್ಪನಖಿ ಇವನ ಸಹೋದರಿಯಾಗಿದ್ದಳು. ಪ್ರಹಸ್ತ ಮಹೋದರ, ಮಾರೀಚ, ಶುಕ, ಸಾರಣ, ಮಹಾಪಾರ್ಶ್ವ, ಧೂಮ್ರಾಕ್ಷ ಮೊದಲಾದವರು ರಾವಣನ ಅಮಾತ್ಯರಾಗಿದ್ದರು. ರಾವಣನು ಅತಿಬಲಾಡ್ಯನಾಗಿದ್ದು ವರಗಳನ್ನು ಪಡೆದುಕೊಂಡಿದ್ದರಿಂದ ಯಾರಿಂದಲೂ ಸೋಲುವಂತಿರಲಿಲ್ಲ. ಕುಬೇರನ ಸಂಗಡ ಯುದ್ದವಾಡಿ ಇವನು ಕುಬೇರನ ಪುಷ್ಪಕವಿಮಾನವನ್ನು ಪಡೆದನು. ರಾವಣನು ಅನೇಕ ರಾಜರನ್ನು ಗೆದ್ದುಕೊಂಡಿದ್ದನು. ಶಂಕರನ ಬಗ್ಗೆ ಅನಾದರದ ಮಾತುಗಳನ್ನು ಈತನು ನುಡಿದಾಗ ನಂದೀಶ್ವರನು ಇವನಿಗೆ ಸರಿಯಾದ ಎಚ್ಚರಿಕೆಯನ್ನು ಕೊಟ್ಟನು. ಕಾಲಿನ ಹೆಬ್ಬೆರಳಿನಿಂದ ಪರ್ವತವನ್ನೇ ಎತ್ತಿಹಾಕುವ ಬಲವಿದ್ದ ರಾವಣನ ಕೈಗಳೆರಡನ್ನೂ ಪರ್ವತದಡಿಯಲ್ಲಿ ಅದುಮಿ ಶಂಕರನು ರಾವಣನ ಗರ್ವಹರಣವನ್ನು ಮಾಡಿದನು. ಯಮನೊಡನೆ ನಡೆದ ಸಂಗ್ರಾಮದಲ್ಲಿ ರಾವಣನ ಮರಣವು ಸಮೀಪಿಸಿತ್ತು. ಆಗ ಬ್ರಹ್ಮದೇವನು ಮಧ್ಯಸ್ಥಿಕೆ ವಹಿಸಿ, ಯಮನನ್ನು ಯುದ್ಧದಿಂದ ಪರಾವೃತ್ತಗೊಳಿಸಿದನು. ನಿವಾತಕವಚನನ್ನು ರಾವಣನು ಸೋಲಿಸಲು ಸಾಧ್ಯವಿಲ್ಲವೆಂಬುದನ್ನು ಅರಿತ ಬ್ರಹ್ಮನು ಅವರಲ್ಲಿ ಸ್ನೇಹ ಬೆಳೆಯುವಂತೆ ಮಾಡಿದನು. ಮರುತ್ತನು ಯಜ್ಞದೀಕ್ಷೆಯನ್ನು ತೆಗೆದುಕೊಂಡಿದ್ದರಿಂದ ಯುದ್ದವು ಆತನಿಗೆ ನಿಷೇಧಿಸಲ್ಪಟ್ಟಿತ್ತು. ಹೀಗಾದ್ದರಿಂದ ಆಗ ರಾವಣನ ಪರಾಭವವು ತಪ್ಪಿತು. ವಾಲಿಯೊಡನೆ ರಾವಣನು ಯುದ್ಧಸನ್ನದ್ದನಾದಾಗ ವಾಲಿಯು ಈತನನ್ನು ಕಂಕುಳಲ್ಲಿ ಅದುಮಿಕೊಂಡು ಹೋಗಿದ್ದನು. ಆಗ ವಾಲಿಯ ಬಲವನ್ನರಿತು ರಾವಣ ಅಗ್ನಿಸಾಕ್ಷಿಯಾಗಿ ವಾಲಿಯೊಡನೆ ಮಿತ್ರತ್ವವನ್ನು ಬೆಳೆಸಿದನು. ಸ್ತ್ರೀಯರ ಮೇಲೆ ಬಲಾತ್ಕಾರ ಮಾಡುವದರಲ್ಲಿ ರಾವಣನದು ಎತ್ತಿದ ಕೈ. ಅನೇಕ ಸಾದ್ವಿಯರ ಆಪ್ತಬಾಂದವರನ್ನು ಯಮಲೋಕಕ್ಕೆ ಅಟ್ಟಿ ಆ ಸ್ತ್ರೀಯರನ್ನು