ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೨೫

ಬಲ ಅಧಿಕವಿರುತ್ತದೆ. “Blessing by Words is more powerful, but the curse by thought is more powerful than that bywords.” ಶಾಪದಲ್ಲಿಯ ವಿಚಾರಕ್ಕೆ ಮಹತ್ವವಿದ್ದರೂ 'ಅದು ವಿಚಾರಪೂರಿತವಿರುತ್ತದೆ' ಎಂತಲ್ಲ.

ಶಾಪ

ಶಾಪವನ್ನು ಯಾರಿಗೆ, ಯಾವ ಕಾರಣಕ್ಕಾಗಿ ಕೊಡುತ್ತಾರೆ? ವಿನಾಕಾರಣ ಉಪದ್ರವವನ್ನುಂಟುಮಾಡುವ ವ್ಯಕ್ತಿಗೆ, ಅಪಕೃತ್ಯವನ್ನೆಸಗುವ ವ್ಯಕ್ತಿಗೆ, ಆತನು ನಾಶವಾಗಬೇಕು! ಆತನಿಗೆ ತಕ್ಕ ಶಾಸ್ತಿಯಾಗಬೇಕು! ಎಂಬ ಭಾವನೆಯಿಂದ ನುಡಿದ ಕಟುಶಬ್ದಗಳಿಂದಲೇ ಶಾಪವಾಗುತ್ತದೆ. ಶಾಪವು ಕೋಪಜನಿತವಾದುದರಿಂದ ಅದರಲ್ಲಿ ಒಂದು ವಿಧದ ಅತಿರೇಕವಿರುತ್ತದೆ. ಶಾಪಗಳು ಎರಡು ಬಗೆಯವಾಗಿವೆ. ಮಾಟ ಮೋಡಿಗಳಿಂದ, ಯಂತ್ರ ತಂತ್ರಗಳಿಂದ, ಅಂಧಶ್ರದ್ಧೆಯಿಂದ ಕೊಟ್ಟ ಶಾಪಗಳಿಗೆ ಅಭಿಚಾರಾತ್ಮಕ ಶಾಪಗಳೆನ್ನುತ್ತಾರೆ. ಇನ್ನೊಂದು ವಿಧದ ಶಾಪಗಳೆಂದರೆ ಧಾರ್ಮಿಕ ಶಾಪಗಳು. ಕೆಲವು ಶಾಪಗಳು ಶರತ್ತುಗಳಿಗೆ ಒಳಪಟ್ಟಿರುತ್ತವೆ. ಆ ಶರತ್ತುಗಳಂತೆ ವರ್ತಿಸಿದರೆ ಶಾಪದ ಪರಿಣಾಮ ತಾಗುವುದಿಲ್ಲ. ಯಾವ ವ್ಯಕ್ತಿಗೆ ಶಾಪವನ್ನು ಕೊಡುವುದಿದೆಯೋ ಆ ವ್ಯಕ್ತಿಯಲ್ಲಿ ಸುಧಾರಣೆಯಾಗಬೇಕು! ಆತನಿಗೆ ಹಿಂಸೆಯಾಗ ಬಾರದೆಂಬ ಮನೋಭಾವವು ಧಾರ್ಮಿಕ ಮತ್ತು ಶರತ್ತುಗಳಿಗೆ ಒಳಪಟ್ಟ ಶಾಪ ಗಳಲ್ಲಿರುತ್ತದೆ. ಧಾರ್ಮಿಕ ಶಾಪವನ್ನು ಕೊಡುವಾತನಲ್ಲಿ ಶಾಪವನ್ನು ಪಡೆಯುವವನ ಬಗ್ಗೆ ಸಹಾನುಭೂತಿ ಇರುವುದರಿಂದ ಮತ್ತು ನೀತಿಯ ಅರಿವು ಇರುವುದರಿಂದ ಧಾರ್ಮಿಕ ಶಾಪಗಳು ಶರತ್ತಿಗೆ ಅಧೀನವಾಗಿರುತ್ತವೆ. ಈ ಬಗೆಯ ಶರತ್ತಿನ ಶಾಪಗಳು ಧಾರ್ಮಿಕ ಶಾಪಗಳಾಗಿರುತ್ತವೆ. ಸ್ವಂತದ ಐಹಿಕ ಸುಖ ಸಮೃದ್ಧಿ, ಉದ್ದಿಷ್ಟ ಸಾಧನೆಗಳಿಗಾಗಿ ನಾಶ, ಮೃತ್ಯು ಹತ್ಯೆ, ಸೋಲು ಇತ್ಯಾದಿಗಳನ್ನು ಬಯಸಿ ಅಭಿಚಾರಾತ್ಮಕ ಶಾಪಗಳನ್ನು ಕೊಡುತ್ತಾರೆ. ಕೋಪಗೊಂಡ ಮುನಿಗಳು ಅಭಿಚಾರಾತ್ಮಕ ಶಾಪಗಳನ್ನು ಕೊಟ್ಟಿದ್ದಾರೆ. ವಸಿಷ್ಠನು ಸೌದಾಸ ಹಾಗೂ ನಿಮಿರಾಜನಿಗೆ ಕೊಟ್ಟ ಶಾಪಗಳು, ಅದೇ ರೀತಿಯಲ್ಲಿ ವಿಶ್ವಾಮಿತ್ರನು ತನ್ನ ಮಕ್ಕಳಿಗೆ ಹಾಗೂ ವಸಿಷ್ಠನ ಮಕ್ಕಳಿಗೆ ಕೊಟ್ಟ ಶಾಪಗಳು ಅಭಿಚಾರತ್ಮಕವಾಗಿದ್ದು. ತದ್ವಿರುದ್ಧವಾಗಿ ಭೃಗು ಮತ್ತು ಅಂಗೀರಸ ಋಷಿಯ ವಂಶಜರಾದ ಮುನಿಗಳು ಹನುಮಂತನಿಗೆ ಸಹಾನೂಭೂತಿ ಪೂರ್ಣ ಶಾಪಗಳನ್ನು ಕೊಟ್ಟಿದ್ದರು.

——————
೭. Encyclopaedia of Religion and Ethics, p. 368.