ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ತಾಯಿ ಮತ್ತು ತಂದೆ ಇವರು ಪುನಃ ಒಬ್ಬರನ್ನೊಬ್ಬರು ಕೂಡಿಕೊಂಡರೋ ಹೇಗೆ?' ಎಂದು ಅನೇಕ ಪ್ರಶ್ನೆಗಳನ್ನು ಶತಾನಂದನು ವಿಶ್ವಾಮಿತ್ರನನ್ನು ವಿಚಾರಿಸಿದನು. ವಿಶ್ವಾಮಿತ್ರನ ತಪದ ಸಾಮರ್ಥ್ಯವನ್ನು ಕುರಿತು ಶತಾನಂದನು ರಾಮನಿಗೆ ವಿವರಿಸಿ ಬಣ್ಣಿಸಿದನು. ಈತನು ಜನಕರಾಜನ ಪುರೋಹಿತನಾಗಿದ್ದನು. ಸೀತೆಯು ಪ್ರತಿಜ್ಞೆಯನ್ನು ಮಾಡುವ ಸಮಯದಲ್ಲಿ ಈತನು ಆ ಸಭೆಯಲ್ಲಿದ್ದನು. ರಾಮನ ಮದುವೆಯ ಪೌರೋಹಿತ್ಯವನ್ನು ಈತನೇ ಮಾಡಿದ್ದನು. ೧೩೦. ಶತ್ರುಘ್ನ * ಈತನು ದಶರಥ ಮತ್ತು ಸುಮಿತ್ರೆಯ ಪುತ್ರನಾಗಿದ್ದಾನೆ. ಭರತನ ಮೇಲೆ ಶತ್ರುಘ್ನನ ಪ್ರೀತಿ ಬಹಳವಿತ್ತು. ಇವನು ಯಾವಾಗಲೂ ಭರತನೊಡನೆ ಇರುತ್ತಿದ್ದನು. ಭರತನು ಸೋದರಮಾವನ ಮನೆಯಿಂದ ಅಯೋಧ್ಯೆಗೆ ಮರಳಿ ಬಂದಾಗ ರಾಮನ ವನವಾಸಕ್ಕೆ ಮಂಥರೆಯೇ ಮೂಲಕಾರಣವೆಂದು ತಿಳಿದುಬಂದು ಶತ್ರುಘ್ರನು ಕೋಪಾವೇಶದಲ್ಲಿ ಮಂಥರೆಯನ್ನು ದರದರನೇ ಎಳೆದು ಅವಳನ್ನು ಕೊಲ್ಲುವವನೇ ಇದ್ದನು. ಆಗ ಭರತನು ನಡುವೆ ಬಂದು ಮಂಥರೆಯನ್ನು ಬದುಕಿಸಿದನು. ಹೆಂಡತಿಯ ಮಾತಿಗೆ ಮರುಳಾಗಿ ಮಗನನ್ನು ವನವಾಸಕ್ಕೆ ಕಳುಹಿದ ತಂದೆಯಾದ ದಶರಥನನ್ನು ಶತ್ರುಘ್ನನು ಬಹಳವಾಗಿ ದೂಷಿಸಿದ್ದಾನೆ. ದಶರಥನ ಈ ವರ್ತನೆಯನ್ನು ಪ್ರತ್ಯಕ್ಷದಲ್ಲಿ ಕಂಡ ಲಕ್ಷಣನು ತೆಪ್ಪಗೆ ಕುಳಿತದ್ದಕ್ಕಾಗಿ ಆತನನ್ನು ಹಳಿದಿದ್ದಾನೆ. ಶತ್ರುಘ್ನನು ಲವಣಾಸುರನ ಪಾರುಪತ್ಯವನ್ನು ಮಾಡಿ ಮಧುಪುರಿಯನ್ನು (ಮಧುರಾ-ಮಥುರೆ) ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಹನ್ನೆರಡು ವರ್ಷಗಳ ಕಾಲದಲ್ಲಿ ಶತ್ರುಘ್ನನು ಆ ಪ್ರದೇಶದಲ್ಲಿ ಸುವ್ಯವಸ್ಥೆ ಮಾಡಿ ರಾಮನ ಭೇಟಿಗೆಂದು ಬಂದನು; ಆತನ ಸಾನ್ನಿಧ್ಯದಲ್ಲಿರ ಬೇಕೆಂದು ಬಯಸಿದನು. ಆಗ ರಾಮನು ಅವನ ಮನವೊಲಿಸಿ ಪುನಃ ಶೂರಸೇನ ಪ್ರಾಂತಕ್ಕೆ ಕಳುಹಿಕೊಟ್ಟನು. ರಾಮನ ಅಶ್ವಮೇಧಯಜ್ಞದ ಸಮಯಕ್ಕೆ ಶತ್ರುಘ್ನನನ್ನು ಆತ್ಮರಕ್ಷಣೆಗಾಗಿ ಯೋಜಿಸಲಾಗಿತ್ತು. ಆಗ ಇವನು ಅನೇಕ ಪ್ರಾಂತಗಳನ್ನು ವಶಪಡಿಸಿಕೊಂಡನು. ತನ್ನ ಅವಧಿ ಮುಗಿಯಲಿದೆ ಎಂದು ಅರಿತ ರಾಮನು ತನ್ನ ರಾಜ್ಯವನ್ನು ಕುಶ-ಲವರಿಗೆ ಒಪ್ಪಿಸಿದನು. ಅದೇ ರೀತಿ ಶತ್ರುಘ್ರನು ತನ್ನ ರಾಜ್ಯವನ್ನು ತನ್ನ ಇಬ್ಬರು ಮಕ್ಕಳಲ್ಲಿ ಪಾಲುಮಾಡಿಕೊಟ್ಟನು. ರಾಮನೊಡನೆ ಈತನೂ ಸರಯೂ ನದಿಯ ಗೋಪ್ರತಾರತೀರ್ಥದಲ್ಲಿ ದೇಹಾರ್ಪಣೆ ಮಾಡಿದನು.