ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಹನುಮಂತನು ಅವರ ಆಶ್ರಮದಲ್ಲಿಯ ಯಜ್ಞಪಾತ್ರೆಗಳನ್ನು, ನಾರುಬಟ್ಟೆ ಮೊದಲಾದವುಗಳನ್ನು ಧ್ವಂಸಗೊಳಿಸುತ್ತಿದ್ದ ಕಾರಣ ಮುನಿಗಳು ಕೋಪಗೊಂಡಿದ್ದರೂ ಶಾಪವು ಸೌಮ್ಯವಾಗಿರಬೇಕೆಂಬುದು ಅವರ ಇಚ್ಛೆಯಿತ್ತು. ವಾಲ್ಮೀಕಿಯು ಋಷಿಗಳ ಮನಃಸ್ಥಿತಿಯನ್ನು ಯಥಾಯೋಗ್ಯವಾಗಿ ವರ್ಣಿಸಿದ್ದಾನೆ:

ಶೇಪುರೇನಂ ರಘುಶ್ರೇಷ್ಠ ನಾತಿಕ್ರುದ್ಧಾತಿಮನ್ಯವಃ |

ಅವನ ವಿನಾಶವನ್ನು ಬಯಸದೇ ವಿಶೇಷ ಸಂತಪ್ತರಾಗದೇ ಋಷಿಗಳು ಶಾಪವನ್ನು ಕೊಟ್ಟರು. ಶಾಪದ ಉತ್ತರಾರ್ಧದಲ್ಲಿ ಉಃಶಾಪವೂ ಇದೆ.

ಶಾಪ ಕೊಡುವುದರಲ್ಲಿ ಇಚ್ಛೆಯಷ್ಟೇ ಪ್ರಾಧಾನ್ಯ ಮಾಧ್ಯಮಕ್ಕೂ ಇರುತ್ತದೆ. ವೆಸ್ಟರ್‌ಮಾರ್ಕನು ಈ ರೀತಿ ಹೇಳುತ್ತಾನೆ:

"The efficacy of a wish or a curse depends not only upon the potency which it possesses from the beginning owing to certain qualities in the person from whom it originates but also on the vehicle by which it is conducted, just as the strength of an electric shock depends both on the original intensity of the current and the condition of the conductor. As particularly efficient conductors are regarded blood, bodily contact, food and drink."

ರಕ್ತ, ನೀರು, ಆಹಾರ, ಶಾರೀರಿಕ ಸ್ಪರ್ಶ ಇವು ಶಾಪದ ಪ್ರಭಾವಯುಕ್ತ ಮಾಧ್ಯಮಗಳು.

ಶಾಪದ ಪರಿಣಾಮವನ್ನು ತಪ್ಪಿಸುವುದು ಸಾಧ್ಯವಿಲ್ಲ. ಅದರ ಪರಿಣಾಮ ಉಚ್ಚಾರಣೆಯಾದಂತೆ ಖಚಿತವಾದದ್ದು. ಪರಿಣಾಮವೇ ಆಗದಿದ್ದರೆ ಅದು ಶಾಪವೆನಿಸದು. ಶಾಪವು ಎಂದಿಗೂ ಸುಳ್ಳಾಗುವುದಿಲ್ಲ. ಉದ್ಗರಿಸಿದ ನುಡಿಗಳನ್ನು ಹಿಂತೆಗೆದುಕೊಳ್ಳುವಂತಿಲ್ಲ; ಅದರಲ್ಲಿ ಬದಲಾವಣೆಯೂ ಅಸಾಧ್ಯ. ಬೇರೆ ವರ ಅಥವಾ ಉಃಶಾಪದಿಂದ ಅದರ ತೀವ್ರತೆಯನ್ನು, ಕಾಲಾವಧಿಯನ್ನು ಕಡಿಮೆಗೊಳಿಸಬಹುದು. ಕಟ್ಟಳೆಯ ಶಾಪಗಳ ಪರಿಣಾಮಗಳು ಶರತ್ತಿನ ಪಾಲನೆಯನ್ನು ಅವಲಂಬಿಸಿ ಉಂಟಾಗುತ್ತವೆ. ಶಾಪದ ಪರಿಣಾಮಗಳು ನಂತರದ ಕಾಲದಲ್ಲಿ ಗೋಚರವಾಗುವವು. ಕೆಲವು ಶಾಪದ ಪರಿಣಾಮಗಳು ತಕ್ಷಣ ಆಗಬಹುದು,

——————

೮. Encyclopaedia of Religion and Ethics, p. 369.